ನವದೆಹಲಿ: ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಪೆಗಾಸಸ್ ಸ್ಪೈವೇರ್ ಬಗ್ಗೆ ವಿಸ್ತೃತವಾದ ಅಫಿಡವಿಟ್ ಸಲ್ಲಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಗೆ ಕೇಂದ್ರ ಸರ್ಕಾರ ಹೇಳಿದೆ. ಇಂದು ನಡೆದ ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಟರ್ ಜನರಲ್ ತುಷಾರ್ ಮೆಹ್ತಾ ಈ ಮಹತ್ವದ ಹೇಳಿಕೆಯನ್ನು ನ್ಯಾಯಪೀಠದ ಮುಂದೆ ಹೇಳಿದ್ದಾರೆ.
ಭಾರತದ ಹಲವು ಗಣ್ಯರ ಮೇಲೆ ಪೆಗಾಸಸ್ ಸ್ಪೈವೇರ್ ಮೂಲಕ ಗೂಢಚರ್ಯೆ ನಡೆಸಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟಿಗೆ ಹಲವು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ತ್ರಿ-ಸದಸ್ಯ ಪೀಠ ವಿಸ್ತೃತ ವರದಿ ಸಲ್ಲಿಕೆಗೆ ಸೂಚನೆ ನೀಡಿತ್ತು. ಇದನ್ನೂ ಓದಿ: ಪೆಗಾಸಸ್ ಬಳಸಿ ಯಾರ ಮೇಲೂ ಗೂಢಾಚಾರಿಕೆ ಮಾಡಿಲ್ಲ- ಸುಪ್ರೀಂಗೆ ಅಫಿಡವಿಟ್ ಸಲ್ಲಿಕೆ
ಇಂದು ನಡೆದ ವಿಚಾರಣೆ ವೇಳೆ ವಾದ ಮಂಡಿಸಿದ ತುಷಾರ್ ಮೆಹ್ತಾ, ಭಯೋತ್ಪಾದನೆ ವಿರುದ್ಧ ಯಾವ ಸಾಫ್ಟ್ ವೇರ್ ಬಳಸಲಾಗುತ್ತಿದೆ ಎಂದು ಉಗ್ರ ಸಂಘಟನೆಗಳಿಗೆ ಗೊತ್ತಿಲ್ಲ. ಭದ್ರತೆಯ ದೃಷ್ಟಿಯಿಂದ ಸರ್ಕಾರ ಆ ಮಾಹಿತಿಯನ್ನು ನೀಡಲು ಇಚ್ಛಿಸುವುದಿಲ್ಲ. ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಕೇಂದ್ರವು ಪೆಗಾಸಸ್ ಸ್ಪೈವೇರ್ ಅನ್ನು ಬಳಸುತ್ತಿದೆಯೇ ಎಂಬ ವಿವರಗಳನ್ನು ಡೊಮೇನ್ ತಜ್ಞರ ಸಮಿತಿಯ ಮುಂದೆ ಚರ್ಚಿಸಬಹುದು. ಆದರೆ ಅಫಿಡವಿಟ್ ನಲ್ಲಿ ಉಲ್ಲೇಖಿಸಲು ಸಾಧ್ಯವಿಲ್ಲ ಎಂದು ಅವರು ಸುಪ್ರೀಂಕೋರ್ಟಿಗೆ ತಿಳಿಸಿದರು.
ಪೆಗಾಸಸ್ ಅನ್ನು ಎ ಸಾಫ್ಟ್ ವೇರ್ ಅಥವಾ ಬಿ ಸಾಫ್ಟ್ ವೇರ್ ನಿಂದ ಮಾಡಲಾಗಿದೆಯೇ ಎಂಬುದನ್ನು ಅಫಿಡವಿಟ್‍ನಲ್ಲಿ ಹೇಳಲಾಗುವುದಿಲ್ಲ. ಸರ್ಕಾರದೊಂದಿಗೆ ಸಂಪರ್ಕವಿಲ್ಲದ ಡೊಮೇನ್ ತಜ್ಞರು ಇದನ್ನು ನೋಡುತ್ತಾರೆ. ನಾವು ಎಲ್ಲವನ್ನು ಅವರ ಮುಂದೆ ಇಡುತ್ತೇವೆ ಎಂದು ಸಾಲಿಸಿಟರ್ ಜನರಲ್ ಹೇಳಿದರು. ರಾಷ್ಟ್ರದ ಹಿತಾಸಕ್ತಿ ಮತ್ತು ಭದ್ರತಾ ವಿಚಾರಗಳು ಸಾರ್ವಜನಿಕ ಭಾಷಣ ಆಗಬಾರದು ಎಂದು ಅವರು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಸಮ್ಮಿಶ್ರ ಸರ್ಕಾರ ಪತನಕ್ಕೆ ಪೆಗಾಸಸ್ ಕಾರಣ: ಪರಮೇಶ್ವರ್
ಈ ಹಿಂದಿನ ವಿಚಾರಣೆಯಲ್ಲಿ ಪೆಗಾಸಸ್ ಮೂಲಕ ಗೂಢಚರ್ಯೆ ನಡೆಸಿದ ಎಲ್ಲ ಆರೋಪಗಳನ್ನು ಕೇಂದ್ರ ಸರ್ಕಾರ ನಿರಾಕರಿಸಿತ್ತು. ಗೊಂದಲಗಳನ್ನು ಬಗೆಹರಿಸಲು ವಿಶೇಷ ತಜ್ಞರ ಸಮಿತಿಯನ್ನು ರಚಿಸುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ರಾಷ್ಟ್ರೀಯ ಭದ್ರತಾ ವಿಚಾರಗಳ ಬಗ್ಗೆ ತಿಳಿದುಕೊಳ್ಳುವ ಉದ್ದೇಶವಿಲ್ಲ. ಆದರೆ ಕೆಲವು ವಿವಾದಿತ ಸಾಫ್ಟ್ ವೇರ್ ಗಳ ಬಗ್ಗೆ ಪರಿಶೀಲನೆ ನಡೆಸಬೇಕಿದೆ ಎಂದು ನ್ಯಾ.ಎನ್ ವಿ ರಮಣ ಅಭಿಪ್ರಾಯಪಟ್ಟಿದ್ದರು. ಪ್ರಕರಣ ಸದ್ಯ ವಿಚಾರಣೆ ಹಂತದಲ್ಲಿದೆ.