ನವದೆಹಲಿ: ಸೆಮಿಫೈನಲ್ (Semi Final) ಎಂದೇ ಬಿಂಬಿತವಾಗಿದ್ದ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಗೆದ್ದಿದ್ದಾರೆ. ನಾಲ್ಕು ರಾಜ್ಯಗಳ ಪೈಕಿ ಮೂರು ರಾಜ್ಯಗಳಲ್ಲಿ ಬಿಜೆಪಿ (BJP) ಭರ್ಜರಿ ಜಯ ಸಾಧಿಸಿದ್ದು ತೆಲಂಗಾಣದಲ್ಲೂ ಪಕ್ಷ ಅತ್ಯುತ್ತಮ ಸಾಧನೆ ಮಾಡಿದೆ.
ಹಿಂದಿ ಭಾಷಿಕರು ಹೆಚ್ಚಿರುವ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಮೂರು ರಾಜ್ಯಗಳನ್ನು ಗೆದ್ದ ಕಾರಣ ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ (Lok Sabha Election) ಬಿಜೆಪಿಯ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆ ಹೆಚ್ಚಾಗಿದೆ. ತೆಲಂಗಾಣದಲ್ಲಿ ಈ ಹಿಂದೆ 1 ಸ್ಥಾನ ಗೆದ್ದಿದ್ದ ಬಿಜೆಪಿ ಈಗ 9 ಸ್ಥಾನ ಪಡೆಯುವ ಮೂಲಕ ಇದೇ ಮೊದಲ ಬಾರಿಗೆ ಮೂರನೇ ಸ್ಥಾನವನ್ನು ಪಡೆದಿದೆ. ಇದನ್ನೂ ಓದಿ: ದೇಶಾದ್ಯಂತ ಜಾತಿ ಗಣತಿಗೆ ಮುಂದಾಗಿದ್ದ ಕಾಂಗ್ರೆಸ್‌ಗೆ ಬಿಗ್ ಶಾಕ್
ಮೂರು ರಾಜ್ಯಗಳಲ್ಲಿ ಬಿಜೆಪಿ ಕಮಾಲ್ ಮಾಡಲು ಹಿಂದಿನ ಲೋಕಸಭೆ ಜಯಭೇರಿಯೂ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. 2019 ರಲ್ಲಿ 4 ರಾಜ್ಯಗಳ ಒಟ್ಟು 82 ಲೋಕಸಭೆ ಕ್ಷೇತ್ರಗಳಲ್ಲಿ 65 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು.
ಛತ್ತೀಸ್‌ಗಢದಲ್ಲಿ ಒಟ್ಟು 11 ಕ್ಷೇತ್ರಗಳ ಪೈಕಿ 9 ಗೆದ್ದಿದ್ದರೆ ಮಧ್ಯಪ್ರದೇಶ 29ರ ಪೈಕಿ 28ರಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು. ರಾಜಸ್ಥಾನದ ಒಟ್ಟು 25 ಸ್ಥಾನಗಳ ಪೈಕಿ ಬಿಜೆಪಿ 24 ರಲ್ಲಿ ಜಯಗಳಿಸಿದರೆ ತೆಲಂಗಾಣದ 17 ಕ್ಷೇತ್ರಗಳ ಪೈಕಿ 4 ಕಡೆ ಗೆಲುವಿನ ನಗೆ ಬೀರಿತ್ತು. ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಈ 4 ರಾಜ್ಯಗಳಲ್ಲಿ ಮೋದಿ ಹವಾ ಧೂಳೆಬ್ಬಿಸಿತ್ತು. ಆ ಜಯದ ಪರಿಣಾಮ ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವಿನ ನಾಗಾಲೋಟ ಮುಂದುವರಿದಿದೆ. ಈ ಜಯ ಲೋಕಸಭೆ ಚುನಾವಣೆಯಲ್ಲೂ ಪರಿಣಾಮ ಬೀರುವ ನಿರೀಕ್ಷೆಯಿದೆ. ಇದನ್ನೂ ಓದಿ: RSS, ABVP ಕಾರ್ಯಕರ್ತ ರೇವಂತ್ ರೆಡ್ಡಿ ಈಗ ಕಾಂಗ್ರೆಸ್ ಸಿಎಂ ರೇಸ್‌ನಲ್ಲಿ – ತೆಲಂಗಾಣಕ್ಕೆ ಸಿಎಂ ಯಾರು?
ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಈಗ ಈ ಎರಡು ರಾಜ್ಯಗಳನ್ನು ಜಯಿಸುವುದರ ಜೊತೆಗೆ ಮಧ್ಯಪ್ರದೇಶವನ್ನು ಉಳಿಸಿಕೊಂಡಿದೆ. ಈ ಮೂರು ರಾಜ್ಯಗಳ ಗೆಲುವು ಲೋಕಸಭೆಗೆ ದಿಕ್ಸೂಚಿ ಎನ್ನಲಾಗುತ್ತಿದೆ. ಬಿಜೆಪಿ ಈ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನೇ ಘೋಷಿಸದೇ ಮೋದಿ ಮುಖವನ್ನು ಇಟ್ಟುಕೊಂಡು ಬಿಜೆಪಿ ಪ್ರಚಾರ ನಡೆಸಿತ್ತು.