– ಬಿಗ್ ಬಿ, ರಿಷಿ ಸುನಕ್, ನಾರಾಯಣ ಮೂರ್ತಿ, ಮುಕೇಶ್ ಅಂಬಾನಿಗೆ ಸೆಂಚುರಿ ಗಿಫ್ಟ್ ಕೊಟ್ಟ ಅಭಿ
ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರವಾಸಿ ಇಂಗ್ಲೆಂಡ್ ವಿರುದ್ಧದ 5ನೇ ಹಾಗೂ ಅಂತಿಮ ಟಿ20 ಪಂದ್ಯ ಪಂದ್ಯ ವೀಕ್ಷಣೆಗೆ ಸೂಪರ್ ಸಂಡೇ ಗಣ್ಯಾತಿಗಣ್ಯರ ದಂಡೇ ಆಗಮಿಸಿದೆ. ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್, ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್ ನಾರಾಯಣ ಮೂರ್ತಿ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ, ಅಮಿತಾಭ್ ಬಚ್ಚನ್, ಪುತ್ರ ಅಭಿಷೇಕ್ ಬಚ್ಚನ್ ಮತ್ತಿತರರು ಆಗಮಿಸಿ ಸಖತ್ ಎಂಜಾಯ್ ಮಾಡಿದ್ದಾರೆ.
ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ತಮ್ಮ ಮಾವನೂ ಆಗಿರುವ ಎನ್.ಆರ್ ನಾರಾಯಣ ಮೂರ್ತಿ ಅವರೊಂದಿಗೆ ಕುಳಿತು ಪಂದ್ಯ ವೀಕ್ಷಣೆ ಮಾಡಿದರು. ಭಾನುವಾರ ವೀಕೆಂಡ್ ಸಹ ಆಗಿದ್ದರಿಂದ ವಾಂಖೆಡೆ ಮೈದಾನ ತುಂಬಿ ತುಳುಕುತ್ತಿತ್ತು. ಈ ನಡುವೆ ಅಭಿಮಾನಿಗಳಿಗೆ ನಿರಾಸೆಗೊಳಿಸದ ಟೀಂ ಇಂಡಿಯಾ ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಅಬ್ಬರಿಸಿತು. ಕೊನೆ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಭರ್ಜರಿ ಶತಕ ಸಿಡಿಸಿ ಮಿಂಚಿದರು. ಇದನ್ನೂ ಓದಿ: U19 Women’s T20 World Cup: ಸತತ 2ನೇ ಬಾರಿಗೆ ಟೀಂ ಇಂಡಿಯಾ ಚಾಂಪಿಯನ್
ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ಬೃಹತ್ ಮೊತ್ತವನ್ನೇ ಕಲೆ ಹಾಕಿತು. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ನಡೆಸಿದೆ. ಒಂದರ ಮೇಲೆ ಒಂದರಂತೆ ಲೀಲಾಜಾಲವಾಗಿ ಸಿಕ್ಸರ್ ಸಿಡಿಸಿದ ಅಭಿಷೇಕ್ ಶರ್ಮಾ, ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿದರು. ಇದರೊಂದಿಗೆ ಟಿ20 ಕ್ರಿಕೆಟ್‌ನಲ್ಲಿ ಅತೀ ವೇಗವಾಗಿ ಶತಕ ಸಿಡಿಸಿದ ಭಾರತ ತಂಡದ ಎರಡನೇ ಆಟಗಾರ ಎಂಬ ದಾಖಲೆ ತಮ್ಮದಾಗಿಸಿಕೊಂಡರು. ಜತೆಗೆ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಎರಡನೇ ಶತಕ ದಾಖಲಿಸಿದರು. ಅಭಿಷೇಕ್ ಶರ್ಮಾ ಭರ್ಜರಿ ಬ್ಯಾಟಿಂಗ್ ಕಂಡು ವಾಖೆಂಡೆ ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕರು ಸಂಭ್ರಮಿಸಿದರು. ಮೊದಲ ಎಸೆತವನ್ನೇ ಸಿಕ್ಸರ್‌ಗೆ ಅಟ್ಟುವ ಮೂಲಕ ಸಂಜು ಸ್ಯಾಮ್ಸನ್ ಇಂಗ್ಲೆಂಡ್ ಬೌಲರ್‌ಗಳ ಮೇಲೆ ಪ್ರಹಾರ ನಡೆಸಿದರು.
ಅಂತಿಮವಾಗಿ ಭಾರತ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 247 ರನ್ ಕಲೆಹಾಕಿತು. ಇಂಗ್ಲೆಂಡ್ ಪರ ಬ್ರೇಯ್ಸನ್ ಕರ್ಸ್ ಮೂರು ವಿಕೆಟ್ ಹಾಗೂ ಮಾರ್ಕ್ ವುಡ್ ಎರಡು ವಿಕೆಟ್ ಕಿತ್ತರು. ಜೋಪ್ರಾ ಆರ್ಚರ್, ಜೇಮೀ ಓವರ್ಟನ್ ಮತ್ತು ಆದಿಲ್ ರಶೀದ್ ಒಂದೊಂದು ವಿಕೆಟ್ ಪಡೆದರು. ಇದನ್ನೂ ಓದಿ: ಸ್ಫೋಟಕ ಶತಕ – ಅಭಿಷೇಕ್ ಶರ್ಮಾ ಬೆಂಕಿ ಬ್ಯಾಟಿಂಗ್‌ಗೆ ಎರಡೆರಡು ದಾಖಲೆ ಉಡೀಸ್