ಮಂಡ್ಯ: ಜೆಡಿಎಸ್ ವಿರುದ್ಧ ಕೈ ನಾಯಕರು ತಿರುಗೇಟು ನೀಡುತ್ತಿದ್ದಂತೆ ಈಗ ಜೆಡಿಎಸ್ ಶಾಸಕರು ನೇರನೇರವಾಗಿ ನಾವು ಕಡಿಮೆ ಏನು ಇಲ್ಲ ಎಂಬಂತೆ ಹೇಳಿಕೆಗಳನ್ನು ನೀಡತೊಡಗಿದ್ದಾರೆ. ನಮಗೆ ಯಾರು ಅನಿವಾರ್ಯ ಇಲ್ಲ. ನಾವು ಎಲ್ಲರಿಗೂ ಅನಿವಾರ್ಯ ಎಂದು ನಾಗಮಂಗಲ ಶಾಸಕ ಸುರೇಶ್ ಗೌಡ ಹೇಳಿದ್ದಾರೆ.
ಕಾಂಗ್ರೆಸ್ ಶಾಸಕರು ಸವತಿ ಮಕ್ಕಳ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಕಾಂಗ್ರೆಸ್ ಶಾಸಕರ ವರ್ತನೆಯನ್ನು ಬಹಳ ದಿನದಿಂದ ಗಮನಿಸುತ್ತಿದ್ದೇವೆ. ಕಾಂಗ್ರೆಸ್ಸಿಗರು ದೊಡ್ಡಣ್ಣನ ರೀತಿಯಂತೆ ವರ್ತಿಸದೇ ಸವತಿ ಮಕ್ಕಳ ರೀತಿ ವರ್ತಿಸುತ್ತಿದ್ದಾರೆ. ಇದರಿಂದ ನಮಗೇನು ನಷ್ಟ ಆಗುವುದಿಲ್ಲ. ನಮಗೆ ಯಾರು ಅನಿವಾರ್ಯ ಅಲ್ಲ. ನಾವು ಎಲ್ಲರಿಗೂ ಅನಿವಾರ್ಯ ಎಂದಿದ್ದಾರೆ.
ನಾವು ಅನಿವಾರ್ಯ ಎನ್ನುವುದನ್ನು ಮಿತ್ರ ಪಕ್ಷದವರು ಅರ್ಥ ಮಾಡಿಕೊಳ್ಳಬೇಕು. ಯಾರನ್ನೋ ಮೆಚ್ಚಿಸಲು ನಮ್ಮ ನಾಯಕರನ್ನು ಅವಹೇಳನ ಮಾಡುವುದನ್ನು ಮುಂದುವರಿಸಬಾರದು. ಅದರ ಫಲವನ್ನ ಅವರೇ ಅನುಭವಿಸುತ್ತಾರೆ. ನಾವು ಅಧಿಕಾರಕ್ಕೆ ಅಂಟಿ ಕೂರುವವರಲ್ಲ. ನಾವು ಎಲ್ಲದಕ್ಕೂ ರೆಡಿ ಇದ್ದೇವೆ ಎಂದು ಈ ವೇಳೆ ಖಡಕ್ ಆಗಿಯೇ ಹೇಳಿದರು.
ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಜೊತೆ ಸರ್ಕಾರ ರಚಿಸಿದ್ದೇವೆ. ನಾವು ಚುನಾವಣಾ ಬಳಿಕ ಯಾರ ಮನೆ ಬಾಗಿಲಿಗೂ ಹೋಗಿಲ್ಲ. ಅವರೇ ಬಂದು ನಮ್ಮ ಸಹಕಾರ ಕೇಳಿದ್ದರು. ಎಲ್ಲದಕ್ಕೂ ಸ್ಪಂದಿಸಿದರೂ ನಮ್ಮ ನಾಯಕರನ್ನು ಕಾಂಗ್ರೆಸ್ ಶಾಸಕರು ದೂಷಿಸುತ್ತಾರೆ. ಜೆಡಿಎಸ್ ಪಕ್ಷದಲ್ಲಿ ಯಾವುದೇ ಒಡಕಿಲ್ಲ. ವರಿಷ್ಟರ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ ಎಂದು ಕೆ.ಸುರೇಶ್ ಗೌಡ ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv