– ಕಾರ್ಯಕ್ರಮದಲ್ಲಿ ಅಕ್ಕಪಕ್ಕವೇ ಕುಳಿತು ಕುಶಲೋಪರಿ ವಿಚಾರಿಸಿದ ಸಿಎಂ-ಗವರ್ನರ್
ಮೈಸೂರು: ಅದ್ದೂರಿ ವಿಶ್ವವಿಖ್ಯಾತ ಮೈಸೂರು ದಸರಾ-2024ಕ್ಕೆ ಪಂಚಿನ ಕವಾಯತು ಕಾರ್ಯಕ್ರಮ ಮೂಲಕ ತೆರೆಬಿದ್ದಿತು.
Advertisement
ಜಂಬೂಸವಾರಿ ಬಳಿಕ ರಾತ್ರಿ 8 ಗಂಟೆ ವೇಳೆಗೆ ಆರಂಭವಾದ ಪಂಚಿನ ಕವಾಯತು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಆಗಮಿಸಿದ್ದರು. ಕಾರ್ಯಕ್ರಮ ಆರಂಭಕ್ಕೂ ಮುನ್ನ ಪೊಲೀಸ್ ಗೌರವ ವಂದನೆ ಸ್ವೀಕರಿಸಿದ ರಾಜ್ಯಪಾಲರು, ಪೊಲೀಸರ ಪಥಸಂಚಲನ ವೀಕ್ಷಣೆ ಮಾಡಿದರು.
Advertisement
Advertisement
ಪಂಜಿನ ಮೆರವಣಿಗೆ ಕೂಡ ಹಳತು ಮತ್ತು ಆಧುನಿಕತೆಯ ಮಿಶ್ರಣವಾಗಿದ್ದು ಈ ಬಾರಿಯ ವಿಶೇಷ. ಅತ್ಯಂತ ಪುರಾತನವಾದ ಪಂಜಿನ ಬೆಳಕಿನ ಜೊತೆಗೆ ಆಕಾಶದಲ್ಲಿ ರಚಿಸಿದ ಅತ್ಯಂತ ಆಧುನಿಕವಾದ 1500 ಡ್ರೋನ್‌ಗಳ ಬೆಳಕಿನ ರಂಗೋಲಿ ನೆರೆದಿದ್ದವರನ್ನು ವಿಸ್ಮಯದ ಜೊತೆಗೆ ರಂಜಿಸಿತು.
Advertisement
ಪಂಜಿನ ಕವಾಯತಿನಲ್ಲಿ ಬೈಕ್‌ಗಳಲ್ಲಿ ವಿವಿಧ ಸ್ಟಂಟ್‌ಗಳ ಪ್ರದರ್ಶನ ಇತ್ತು. ಬೈಕ್ ಸ್ಟಂಟ್‌ಗಳು ಮೈ ಜುಮ್ಮೆನಿಸುವಂತಿತ್ತು. ಬೈಕ್‌ಗಳಲ್ಲಿ ಸಿಬ್ಬಂದಿ ನಿಂತು ಪಿರಮಿಡ್ ಮಾದರಿಯಲ್ಲಿ ಸಾಗಿ ಗಮನಸೆಳೆದರು. ಫೈರ್ ಜಂಪ್, ಶ್ವೇತ ಅಶ್ವ ಜಂಪ್, ಟ್ಯೂಬ್ ಲೈಟ್ ಜಂಪ್, ಸರ್ಕಲ್ ಎಕ್ಸ್ಸೈಜ್, ಓಪನಿಂಗ್ ಕ್ರಾಸಿಂಗ್, ಪ್ಯಾರಲ್ ಕ್ರಾಸಿಂಗ್, ಗ್ರೂಪ್ ಈವೆಂಟ್ ಸೇರಿದಂತೆ ವಿವಿಧ ಕಸರತ್ತು ಪ್ರದರ್ಶನ ನಡೆಯಿತು.
ಬುಲೆಟ್ ಮೇಲೆ ನಿಂತು, ಮಲಗಿ ಸಾಗುವುದು, ಬೈಕ್ ಚಲಿಸುವಾಗಲೇ ಅದರ ಸೀಟ್ ಮೇಲೆ ಮಲಗಿ ಈಜಾಡುವಂತೆ ಮಾಡುವುದು, ಚಲಿಸುವ ಬೈಕ್ ಮೇಲೆ ನಿಂತು ಸೆಲ್ಯೂಟ್ ಹೊಡೆಯುವುದು, ಬೈಕ್ ಚಲಿಸುವಾಗಲೇ ಏಣಿ ಏರುವುದು ಹೀಗೆ ಹಲವಾರು ಸ್ಟಂಟ್‌ಗಳಿಗೆ ಜನ ಚಪ್ಪಾಳೆ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು. ಇದರ ಜೊತೆಗೆ ವಿವಿಧ ಕಲಾತಂಡಗಳಿಂದ ನೃತ್ಯ ಪ್ರದರ್ಶನ ಕೂಡ ನಡೆಯಿತು. ಕರಾವಳಿ ಸಂಸ್ಕೃತಿ ಪ್ರತಿಬಿಂಬಿಸುವ ಹುಲಿ ಕುಣಿತ ಕೂಡ ಗಮನ ಸೆಳೆಯಿತು.
ಮುಡಾ ಹಗರಣದ ಬಳಿಕ ಸರ್ಕಾರದ ಹಲವು ಕಾರ್ಯಕ್ರಮಗಳಿಂದ ಅಂತರ ಕಾಪಾಡಿಕೊಂಡಿದ್ದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಅನೇಕ ವಿವಿಗಳ ಘಟಿಕೋತ್ಸವಗಳಲ್ಲಿ ಭಾಗಿಯಾಗದೇ ಅಂತರ ಕಪಾಡಿಕೊಂಡಿದ್ದರು. ಇದೇ ಮೊದಲ ಬಾರಿಗೆ ನಾಡಹಬ್ಬ ದಸರಾದ ಕೊನೆಯ ಕಾರ್ಯಕ್ರಮವಾದ ಪಂಜಿನ ಕವಾಯತು ಕಾರ್ಯಕ್ರಮಕ್ಕೆ ಆಗಮಿಸಿದರು. ವೇದಿಕೆಗೆ ಆಗಮಿಸುವಂತೆ ಆರಂಭದಲ್ಲಿ ಶಾಸಕ ತನ್ವೀರ್ ಸೇಠ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕೈ ಮುಗಿದು ರಾಜ್ಯಪಾಲರನ್ನು ಸ್ವಾಗತಿಸಿದರು. ಬಳಿಕ ಸಿಎಂ ಸಿದ್ದರಾಮಯ್ಯ ಬಳಿ ಬಂದ ರಾಜ್ಯಪಾಲರನ್ನು ಸಿಎಂ ಅವರು ಎದ್ದು ನಿಂತು ಕೈ ಕುಲುಕಿ ಬರಮಾಡಿಕೊಂಡರು. ಡಿಸಿಎಂ ಡಿಕೆ ಶಿವಕುಮಾರ್ ಸಹ ಕೈ ಕುಲುಕಿದರು. ರಾಜ್ಯಪಾಲರು ಆಸೀನರಾದ ಬಳಿಕ ಸಿಎಂ ಹಾಗೂ ಡಿಸಿಎಂ ರಾಜ್ಯಪಾಲರ ಅಕ್ಕಪಕ್ಕವೇ ಆಸೀನರಾಗಿ ಕಾರ್ಯಕ್ರಮ ವೀಕ್ಷಿಸಿದರು.