ಚಿಕ್ಕಮಗಳೂರು: ಖ್ಯಾತ ಬೀರೂರು (Birur) ಮೈಲಾರಲಿಂಗೇಶ್ವರ ಸ್ವಾಮಿಯ (Mylara Lingeshwara) ಕಾರ್ಣಿಕದ ನುಡಿ ಇಂದು (ಅ.21) ಬೆಳಗಿನ ಜಾವ 4 ಗಂಟೆಗೆ ಹೊರ ಬಿದ್ದಿದೆ.
ಕಡೂರು (Kadur) ತಾಲೂಕಿನ ಬೀರೂರಿನ ಮಹಾನವಮಿ ಬಯಲಿನಲ್ಲಿ ದೇವಸ್ಥಾನದ ಅರ್ಚಕ ದಶರಥ ಪೂಜಾರ್ ಅವರು ʻ ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ, ಸೃಷ್ಟಿಗೆ ನಾಡು ಸಿರಿಯಾಯಿತು, ಮದಗಜಗಳು ಕಾದಾಡಿದರು, ಕತ್ತಲೆಯ ದೀಪಕ್ಕೆ ಬೆಳಕಾಯಿತು, ಸರ್ವರು ಎಚ್ಚರದಿಂದರಬೇಕು ಎಂದು ಕಾರ್ಣಿಕ ನುಡಿದಿದ್ದಾರೆ. ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಕಾರ್ಣಿಕದ ನುಡಿಗೆ ಸಾಕ್ಷಿಯಾದರು. ಇದನ್ನೂ ಓದಿ: ಕೆಂಪುಕೋಟೆಯ ಮೇಲೆ ಮುತ್ತು ಚೆಲ್ಲಿತ್ತಲೇ ಪರಾಕ್ – ಮಾಲತೇಶ ದೇವರ ಕಾರ್ಣಿಕೋತ್ಸವದಲ್ಲಿ ಗೊರವಯ್ಯನ ಭವಿಷ್ಯ
ಮೈಲಾರಲಿಂಗೇಶ್ವರ ಸ್ವಾಮಿ ದೇವಾಲಯದ ಅರ್ಚಕ ವಿಜೇತ್ ಅವರು ಈ ಕಾರ್ಣಿಕದ ಅರ್ಥವನ್ನು ವಿಶ್ಲೇಷಿಸಿದ್ದಾರೆ. ಸೃಷ್ಟಿಗೆ ನಾಡು ಸಿರಿಯಾಯ್ತು ಎಂದರೆ ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ವಾಣಿಜ್ಯ ಕ್ಷೇತ್ರದಲ್ಲಿ ಪ್ರಗತಿಯ ಸಂಕೇತವಾಗಿದೆ. ಮದಗಜಗಳು ಕಾದಾಡಿದರು ಎಂದರೆ ಪ್ರಭಾವಿ ವ್ಯಕ್ತಿಗಳು ಅಥವಾ ಬಲಿಷ್ಠ ಗುಂಪುಗಳ ನಡುವೆ ಸಂಘರ್ಷ ಉಂಟಾಗುವ ಸೂಚನೆ ಎಂದು ತಿಳಿಸಿದ್ದಾರೆ.
ಕತ್ತಲೆಯ ದೀಪಕ್ಕೆ ಬೆಳಕಾಯಿತು ಎಂದರೆ ಕಷ್ಟ, ಅಜ್ಞಾನ ಮತ್ತು ಅನ್ಯಾಯದ ನಡುವೆ ಜ್ಞಾನ, ಸತ್ಯ ಹಾಗೂ ನ್ಯಾಯದ ಬೆಳಕು ಮೂಡುವ ಸಂಕೇತವಾಗಿದೆ. ಕಾರ್ಣಿಕದ ನುಡಿಯಲ್ಲಿ ಎರಡು ಎಚ್ಚರಿಕೆಯ ಸಂದೇಶಗಳು, ಒಂದು ಶುಭ ಸೂಚನೆ ಇದೆ ಎಂದು ಅರ್ಚಕರು ವಿಶ್ಲೇಷಿಸಿದ್ದಾರೆ. ಇದನ್ನೂ ಓದಿ: ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ – ಹಸಿರು ಸೀರೆಯಲ್ಲಿ ಕಂಗೊಳಿಸಿದ ಚಾಮುಂಡೇಶ್ವರಿ
