– ಜಂಬೂಸವಾರಿಗೆ ಕ್ಯಾ.ಪ್ರಶಾಂತ ನೇತೃತ್ವದಲ್ಲಿ ಗಜಪಡೆ ತಯಾರಿ
ಮೈಸೂರು: ನಾಡಹಬ್ಬ ದಸರಾ ಜಂಬೂಸವಾರಿ (Dasara Jamboo Savari) ಮೆರವಣಿಗೆಗೆ ಕ್ಷಣಗಣನೆ ಶುರುವಾಗಿದೆ. ಹಸಿರು ಸೀರೆಯಲ್ಲಿ ತಾಯಿ ಚಾಮುಂಡೇಶ್ವರಿ (Chamundeshwari) ಕಂಗೊಳಿಸಿದ್ದಾಳೆ. ಚಿನ್ನದಂಬಾರಿ ಹೊರಲು ಕ್ಯಾಪ್ಟನ್ ಪ್ರಶಾಂತ ಸಿದ್ಧನಾಗಿದ್ದಾನೆ.
ಚಾಮುಂಡಿ ಬೆಟ್ಟದಲ್ಲಿ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಗಿದ್ದು, ತೆರೆದ ವಿಶೇಷ ವಾಹನದಲ್ಲಿ ಮೆರವಣಿಗೆ ಹೊರಟಿದೆ. ಮಂಗಳವಾದ್ಯದೊಂದಿಗೆ ಅರಮನೆ ವರೆಗೆ ಉತ್ಸವ ಮೂರ್ತಿ ಮೆರವಣಿಗೆ ಸಾಗಿದೆ. ಭಕ್ತರು ರಸ್ತೆಯ ಎರಡೂ ಬದಿಗಳಲ್ಲಿ ನಿಂತು ತಾಯಿಯ ದರ್ಶನ ಪಡೆದರು.
ಜಂಬೂಸವಾರಿ ಮೆರವಣಿಗೆಗೆ ಕ್ಯಾಪ್ಟನ್ ಪ್ರಶಾಂತ ನೇತೃತ್ವದಲ್ಲಿ ಆನೆಗಳು ಸಹ ಸಿದ್ಧವಾಗುತ್ತಿವೆ. ಆನೆಗಳಿಗೆ ಬಣ್ಣ ಬಣ್ಣದ ಚಿತ್ತಾರಗಳಿಂದ ಅಲಂಕಾರ ಮಾಡಲಾಗುತ್ತಿದೆ. ಕಲಾವಿದ ನಾಗಲಿಂಗ ಸ್ವಾಮಿ ನೇತೃತ್ವದ ತಂಡ ಚಿತ್ತಾರ ಕಾರ್ಯ ಮಾಡುತ್ತಿದೆ. ಕಳೆದ 18 ವರ್ಷಗಳಿಂದ ಜಂಬೂಸವಾರಿಯಲ್ಲಿ ಪ್ರಶಾಂತ ಆನೆ ಭಾಗವಹಿಸುತ್ತಿದೆ. ಇದೇ ಮೊದಲ ಬಾರಿಗೆ ಚಿನ್ನದಂಬಾರಿ ಹೊರುವ ಜವಾಬ್ದಾರಿ ಸಿಕ್ಕಿದೆ.
ಜಂಬೂಸವಾರಿ ಮೆರವಣಿಗೆಯಲ್ಲಿ 13 ಆನೆಗಳ ಪೈಕಿ 12 ಆನೆಗಳು ಮೆರವಣಿಗೆಯಲ್ಲಿ ಭಾಗಿಯಾಗಲಿವೆ. ಈ ಬಾರಿ ಧನಂಜಯನಿಗೆ ಮೆರವಣಿಗೆಯಿಂದ ಕೊಕ್ ನೀಡಲಾಗಿದೆ. ಅಭಿಮನ್ಯು ನಿಶಾನೆ ಆನೆ ಜವಾಬ್ದಾರಿ ನಿರ್ವಹಿಸಲಿದ್ದಾನೆ. ಲಕ್ಷ್ಮಿ ಮತ್ತು ಕಾವೇರಿ ಕುಮ್ಕಿ ಆನೆಗಳಾಗಿ ಮೆರವಣಿಗೆಯಲ್ಲಿ ಸಾಗಲಿವೆ. ಗೋಪಿ – ನೌಪತ್ ಆನೆ ಹಾಗೂ ಶ್ರೀಕಂಠ , ಏಕಲವ್ಯ, ಮಹೇಂದ್ರ, ಸುಗ್ರೀವ, ಶ್ರೀರಾಮ, ರೂಪಾ, ಮತ್ತು ಚೈತ್ರಾ ಸಾಲಾನೆಗಳಾಗಿವೆ.
