– ಪ್ರಧಾನಿಯಾಗಲು ರಂಗನಾಥ ಸ್ವಾಮಿ, ಚೆನ್ನಮ್ಮನೇ ಕಾರಣ
ಹಾಸನ: ನನ್ನ ಪತ್ನಿ ಅನ್ನಪೂರ್ಣೆ, ಆಕೆಯನ್ನು ರಂಗನಾಥಸ್ವಾಮಿ ಪಾದಕ್ಕೆ ಕಳಿಸುತ್ತಿದ್ದೇನೆ ಎಂದು ಮಡದಿ ಚೆನ್ನಮ್ಮರನ್ನು ನೆನೆದು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು (HD Devegowda) ಕಣ್ಣೀರಿಟ್ಟರು.
ಗೌಡರ ಹುಟ್ಟೂರು ಹರದನಹಳ್ಳಿ ಮಾವಿನಕೆರೆಯ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಅಂತ್ಯಕ್ರಿಯೆ ನೆರವೇರಿತು. ಅಂತಿಮ ಕಾರ್ಯವಿಧಾನದ ವೇಳೆ ದೇವೇಗೌಡರು ಪತ್ನಿ ನೆನೆದು ಭಾವುಕರಾದರು. ಇದನ್ನೂ ಓದಿ: ಮಣ್ಣಲ್ಲಿ ಮಣ್ಣಾದ ಚೆನ್ನಮ್ಮ – ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಅಂತ್ಯಕ್ರಿಯೆ
ನಮ್ಮ ಮಕ್ಕಳು, ಅಳಿಯಂದಿರು, ಹೆಣ್ಣು ಮಕ್ಕಳು ಎಲ್ಲರೂ ಸೇರಿ ರಂಗನಾಥನ ಸಾನಿಧ್ಯದಲ್ಲಿ ಸಮಾಧಿ ಮಾಡಲು ತೀರ್ಮಾನಕ್ಕೆ ಬಂದಿದ್ದು. ಈ ಜಮೀನನ್ನು ಕ್ರಯಕ್ಕೆ ಬರೆಸಿಕೊಂಡು ಪಡವಲಹಿಪ್ಪೆಯಲ್ಲಿ ಮಾಡಬೇಕೆಂಬುದು ನನ್ನ ಇಚ್ಛೆಯಾಗಿತ್ತು. ಆದರೆ ಮಕ್ಕಳು ಇಲ್ಲಿ ಮಾಡಲು ನಿರ್ಧಾರ ಮಾಡಿದ್ದಾರೆ. ನನ್ನ ಹೆಂಡತಿ ಅನ್ನಪೂರ್ಣೆ. ಇದನ್ನು ಉತ್ಪ್ರೇಕ್ಷೆಯಿಂದ ಮಾತನಾಡುತ್ತಿಲ್ಲ. ಅವರು ಹೇಗೆ ನಡೆದು ಬಂದ್ರು, ನನ್ನ ರಾಜಕೀಯ ಬೆಳವಣಿಗೆಗಾಗಲಿ ಹೇಗೆ ಸಹಕಾರ ನೀಡಿದ್ರು ಅಂತ ಹೇಳುತ್ತಿದ್ದೇನೆ. ಅವರನ್ನು ರಂಗನಾಥನ ಸಾನಿಧ್ಯಕ್ಕೆ ಕಳುಹಿಸಿಕೊಡುತ್ತಿದ್ದೇನೆ. ಇದನ್ನು ವಿಶ್ಲೇಷಣೆ ಮಾಡುವುದು ಕಷ್ಟ ಎಂದು ಭಾವುಕರಾದರು.
ನಾನು ಪ್ರಧಾನಿಯಾಗುವ ಮಟ್ಟಕ್ಕೆ ಬೆಳೆಯಲು ಕಾರಣನೇ ರಂಗನಾಥನ ಆಶೀರ್ವಾದ. ನನ್ನ ರಾಜಕೀಯ ಬೆಳವಣಿಗೆಗೆ ಶಕ್ತಿ ಕೊಟ್ಟಿದ್ದು ಇದೇ ರಂಗನಾಥಸ್ವಾಮಿ. ಇನ್ನೊಂದು ಕಡೆ ನನ್ನನ್ನು ಅಗಲಿ ಹೋಗಿರುವ, ನನ್ನನ್ನು ಬಿಟ್ಟು ಹೋಗಿರುವ ಚೆನ್ನಮ್ಮನೇ ಕಾರಣ. ನನ್ನ ಪ್ರತಿ ಹಂತದಲ್ಲಿ ನನಗೆ ಶಕ್ತಿ ತುಂಬಿದವರು. ನನ್ನ ಕುಟುಂಬದ ಎಲ್ಲರೂ ನನ್ನ ಬೆಳವಣಿಗೆಗೆ ಕಾರಣರಾಗಿದ್ದಾರೆ. ಹೀಗಾಗಿ ಕೊನೆಗೆ ನಮ್ಮ ಮಕ್ಕಳು ಇಲ್ಲಿ ಮಾಡೋಣ. ರಂಗನಾಥನ ಆಶೀರ್ವಾದ ದೇಶದ ಪ್ರಧಾನಿಯಾಗುವ ಮಟ್ಟಕ್ಕೆ ಮಾಡಿದೆ ಎಂದ್ರು. ಆಯ್ತು ಎಂದೆ. ಇನ್ನೂ ಮಳೆ ಬರುತ್ತೆ, ಇಲ್ಲಿ ಅಂತ್ಯಕ್ರಿಯೆ ಮಾಡುವುದು ಕಷ್ಟ ಅಂತ ಬಹಳ ಜನರ ಅಭಿಪ್ರಾಯ ಆಗಿತ್ತು. ಆದರೆ ಎಳ್ಳಷ್ಟು ತೊಂದರೆಯಾಗಿಲ್ಲ ಎಂದು ಗದ್ಗದಿತರಾದರು.ಇದನ್ನೂ ಓದಿ: ಚೆನ್ನಮ್ಮ ಅಂತಿಮ ಯಾತ್ರೆ ಆರಂಭ – ಹೊಳೆನರಸೀಪುರದ ಪ್ರಮುಖ ಗ್ರಾಮಗಳಲ್ಲಿ ಮೆರವಣಿಗೆ
