ಬೆಂಗಳೂರು: ಸಿಎಂ ಸಿದ್ದರಾಮಯ್ಯ ಭವಿಷ್ಯ ನಾಳೆ ನಿರ್ಧಾರವಾಗಲಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಕೇಸಲ್ಲಿ (MUDA Case) ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ (CM Siddaramaiah) ಸಲ್ಲಿಸಿರುವ ರಿಟ್ ಅರ್ಜಿಯ ತೀರ್ಪನ್ನು ಹೈಕೋರ್ಟ್ (High Court) ಮಂಗಳವಾರ ಪ್ರಕಟಿಸಲಿದೆ.
ಈಗಾಗಲೇ ಎರಡು ಕಡೆಯ ವಾದವನ್ನು ಆಲಿಸಿ ವಿಚಾರಣೆ ಮುಕ್ತಾಯಗೊಳಿಸಿದ್ದ ನ್ಯಾ. ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಮಧ್ಯಾಹ್ನ 12 ಗಂಟೆಗೆ ತೀರ್ಪು ಪ್ರಕಟಿಸಲಿದೆ. ಸಿದ್ದರಾಮಯ್ಯ ಪರವಾಗಿ ಹಿರಿಯ ಸುಪ್ರೀಂ ಕೋರ್ಟ್ ವಕೀಲ ಅಭಿಷೇಕ್ ಮನು ಸಿಂಘ್ವಿ ಸೇರಿದಂತೆ ಹಲವು ಮಂದಿ ವಾದಿಸಿದ್ದರು.
Advertisement
ಏನಿದು ವಿವಾದ?
ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಹೆಸರಿನಲ್ಲಿದ್ದ ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿ 3.16 ಎಕರೆ ಜಮೀನನ್ನು ದೇವನೂರು ಬಡಾವಣೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಈ ಜಾಗವನ್ನು ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ದಾನ ಪತ್ರದ ಮೂಲಕ ಅವರ ಸಹೋದರ ಕೊಟ್ಟಿದ್ದರು. ಇದು ಒಟ್ಟು 1,48,104 ಚದರ ಅಡಿ ಜಾಗ ಇತ್ತು. ಅದರ ಬದಲಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ 2021ರಲ್ಲಿ ಪಾರ್ವತಿ ಅವರಿಗೆ ಮೈಸೂರಿನ ಪ್ರತಿಷ್ಠಿತ ವಿಜಯನಗರ ಬಡಾವಣೆಯಲ್ಲಿ 38,284 ಚದರ ಅಡಿ ಜಾಗ ನೀಡಿದ್ದು ಈಗ ವಿವಾದದ ಕೇಂದ್ರಬಿಂದು.
Advertisement
Advertisement
ಬದಲಿ ನಿವೇಶನಕ್ಕೆ ಪತ್ರ
ಮೈಸೂರಿನ ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿರುವ 3 ಎಕರೆ 16 ಗುಂಟೆ ಜಾಗವನ್ನು ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಸಹೋದರ, ಪಾರ್ವತಿಯವರಿಗೆ ದಾನವಾಗಿ ನೀಡಿದ್ದರು. ಈ ಜಾಗವನ್ನು ಅಭಿವೃದ್ಧಿಗಾಗಿ ಪ್ರಾಧಿಕಾರ ಕಾನೂನು ಪ್ರಕಾರವೇ ವಶಪಡಿಸಿಕೊಂಡಿತ್ತು. 1998 ರಲ್ಲಿ ನೋಟಿಫೈ ಮಾಡಿತ್ತು. ಇದೇ ಜಾಗದಲ್ಲಿ ದೇವನೂರು 3ನೇ ಹಂತದ ಬಡಾವಣೆಯನ್ನೂ ಅಭಿವೃದ್ಧಿ ಮಾಡಿದೆ. ವಿಷಯ ಏನೆಂದರೆ ವಶಪಡಿಸಿಕೊಂಡ ಜಾಗಕ್ಕೆ ಬದಲಿ ಭೂಮಿ ಕೊಡುವುದು ಪ್ರಾಧಿಕಾರದ ಕರ್ತವ್ಯ. ಹೀಗಾಗಿ ಬದಲಿ ಭೂಮಿ ನೀಡುವಂತೆ 2014ರಲ್ಲಿ ಸಿಎಂ ಪತ್ನಿ ಅರ್ಜಿ ಹಾಕಿದ್ದರು. 2017ರಲ್ಲಿ ನಡೆದ ಸಭೆಯಲ್ಲಿ ಅಭಿವೃದ್ಧಿಪಡಿಸದೇ ಇರುವ ಭೂಮಿ ನೀಡಲು ತೀರ್ಮಾನಿಸಲಾಗಿತ್ತು. ಆದರೆ ಇದಕ್ಕೆ ಒಪ್ಪದ ಸಿಎಂ ಪತ್ನಿ ಪಾರ್ವತಿ 2021ರಲ್ಲಿ ಮತ್ತೊಂದು ಪತ್ರ ಬರೆದು 50:50 ಅನುಪಾತದಲ್ಲಿ ಬದಲಿ ನಿವೇಶನ ಕೊಡಿ ಎಂದು ಮನವಿ ಸಲ್ಲಿಸಿದ್ದರು. ಸಿಎಂ ಪತ್ನಿ ಕೋರಿಕೆಯಂತೆ 2021ರಲ್ಲಿ 50:50 ಅನುಪಾತದಲ್ಲಿ ಭೂಮಿ ನೀಡಲಾಗಿದೆ. ಇದನ್ನೂ ಓದಿ: ಪೊಲೀಸ್ ಸ್ಟೇಷನ್, ತನಿಖಾ ಏಜೆನ್ಸಿಗಳೇ ಬೇಡ, ರಾಜ್ಯಪಾಲರಿಗೆ ದೂರು ನೀಡಿದರೆ ಸಾಕು: ಎಂಬಿ ಪಾಟೀಲ್
Advertisement
ಹಗರಣದ ವಾಸನೆ ಬಂದಿದ್ದು ಯಾಕೆ?
ಭೂಮಿ ವಶಪಡಿಸಿಕೊಂಡ ಜಾಗ ಬಿಟ್ಟು ಅಥವಾ ಸಮಾನಾಂತರವಾದ ಜಾಗ ಬಿಟ್ಟು ವಿಜಯನಗರದಲ್ಲಿ ಅಭಿವೃದ್ಧಿ ಆಗಿರುವ 38,284 ಚದರಡಿ ಭೂಮಿ ಹಂಚಿಕೆ ಮಾಡಲಾಗಿದೆ. ಅಲ್ಲದೇ 1998ರಲ್ಲಿ ಕಳೆದುಕೊಂಡ ಭೂಮಿಗೆ 2021ರಲ್ಲಿ ಪರಿಹಾರ ನೀಡಲಾಗಿದೆ ಎಂಬುದು ಆರ್‌ಟಿಐ ಕಾರ್ಯಕರ್ತರ ಆರೋಪ. ಭೂಮಿ ವಶಪಡಿಸಿಕೊಂಡ ಜಾಗದಲ್ಲಿ, ಅಥವಾ ಸಮಾನಾಂತರ ಜಾಗದಲ್ಲಿ ಬದಲಿ ಭೂಮಿ ನೀಡಬೇಕು ಎಂಬುದು ಕಾನೂನಿನಲ್ಲಿದೆ. ಆದರೆ ಸಿಎಂ ಪತ್ನಿಗೆ ಭೂಸ್ವಾಧೀನವಾದ ಜಾಗ ಬಿಟ್ಟು, ವಿಜಯನಗರದಲ್ಲಿ ಭೂಮಿ ಕೊಡಲಾಗಿದೆ. ಸಿಎಂ ಪತ್ನಿ ಅಲ್ಲದೇ ಹಲವು ಮಂದಿ ಭೂಮಿಯನ್ನು ಮುಡಾ ವಶಪಡಿಸಿಕೊಂಡಿದೆ. ಸಿಎಂ ಪತ್ನಿಗೆ ಹಂಚಿಕೆ ಮಾಡಿದಂತೆ ಇವರಿಗೂ ಜಾಗವನ್ನು ವಿಜಯನಗರ ಬಡಾವಣೆಯಲ್ಲಿ ಜಾಗ ಹಂಚಿಕೆ ಮಾಡಿಲ್ಲ. 50:50 ಅನುಪಾತ ನಿಯಮವನ್ನ ದುರುಪಯೋಗಪಡಿಸಿಕೊಂಡು 1998ರಲ್ಲಿ ವಶಪಡಿಸಿಕೊಂಡ ಜಾಗಕ್ಕೆ 2020ರಲ್ಲಿ ಜಾರಿಗೆ ಬಂದ 50-50 ಅನುಪಾತ ಬಳಸಿದ್ದೇಕೆ ಎನ್ನುವುದೇ ದೊಡ್ಡ ಪ್ರಶ್ನೆ.
ಕೆಸರೆಯಲ್ಲಿ ಕಡಿಮೆ ಮೌಲ್ಯದ ಜಾಗ ಸ್ವಾಧೀನ ಮಾಡಿ, ವಿಜಯನಗರದಲ್ಲಿ ಹೆಚ್ಚಿನ ಮೌಲ್ಯದ ಬದಲಿ ಭೂಮಿ ನೀಡಲಾಗಿದೆ. ಅಂದರೆ, ದೇವನೂರು ಬಡಾವಣೆಯಲ್ಲಿ ಚದರ ಅಡಿಗೆ 2,500 ರೂ. ನಿಂದ 3,000 ರೂ.ವರೆಗೆ ದರ ಇದೆ. ಆದರೆ ವಿಜಯನಗರದಲ್ಲಿ ಚದರ ಅಡಿಗೆ 7 ರಿಂದ 8 ಸಾವಿರ ರೂಪಾಯಿ ಇದೆ. ಹೀಗಾಗಿ ಸಿಎಂ ಮತ್ತು ಸಿಎಂ ಪತ್ನಿಗೆ ಆರ್ಥಿಕ ಲಾಭ ಮಾಡಿಕೊಡಲು ಮುಡಾ ಅಧಿಕಾರಿಗಳು ಸರ್ಕಾರಕ್ಕೆ ಆರ್ಥಿಕ ನಷ್ಟ ಮಾಡಿದ್ದಾರೆ. ಸಿಎಂ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದರಿಂದ ಈ ಜಾಗ ಹಂಚಿಕೆ ಮಾಡಲಾಗಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.
ಒಂದನೇಯದಾಗಿ ಸಿಎಂ ಪತ್ನಿಗೆ 1998ರ ಜಾಗಕ್ಕೆ 2021ರಲ್ಲಿ ಪರಿಹಾರ ಸಿಕ್ಕಿರುವುದು, ಎರಡನೇಯದ್ದು ಬೇರೆ ಕಡೆ ಭೂಮಿ ಕೊಟ್ಟಿರುವುದು, ಮೂರನೇಯದ್ದು 50-50 ಅನುಪಾತ ದುರ್ಬಳಕೆ ಮಾಡಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿ ಈಗ ಸಿಎಂ ಸಂಕಷ್ಟಕ್ಕೆ ಕಾರಣವಾಗಿದೆ.
ಬೆಳಕಿಗೆ ಬಂದಿದ್ದು ಹೇಗೆ?
50:50 ಅನುಪಾತದ ಅಡಿ ನಿವೇಶನ ಹಂಚಿಕೆ ಬಗ್ಗೆ ಆರ್‌ಟಿಐ (RTI) ಕಾರ್ಯಕರ್ತರು ಧ್ವನಿ ಎತ್ತಿದ್ದರು. ಈ ವೇಳೆ ಸಿಎಂ ಪತ್ನಿಗೂ ನಿವೇಶನ ಹಂಚಿಕೆ ಆಗಿರುವ ದಾಖಲೆ ಬೆಳಕಿಗೆ ಬಂದವು. ಹೀಗಾಗಿ ಹಗರಣ ರಾಜ್ಯಮಟ್ಟದಲ್ಲಿ ಸುದ್ದಿಯಾಯಿತು.