ಪುಣೆ: 28 ವರ್ಷದ ತಾಯಿಯೊಬ್ಬಳು ತನ್ನ ಮೂವರು ಮಕ್ಕಳನ್ನು ಕೊಂದು ನಂತರ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ಅಲಿಯಾ ಭಗ್ಬಾನ್ (9), ಜೋಭಾ (7) ಮತ್ತು ಜಿಯಾನ್ (6) ಮೂವರು ಮಕ್ಕಳನ್ನು ಕೊಂದು ತಾಯಿ ಫಾತಿಮಾ ಅಕ್ರಮ್ ಭಗ್ವಾನ್ (28) ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಘಟನೆ ಭಾನುವಾರ ಸಂಜೆ ಬೆಳಕಿಗೆ ಬಂದಿದೆ. ಫಾತಿಮಾ ತನ್ನ ಮಕ್ಕಳನ್ನು ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
Advertisement
Advertisement
ಮೃತರು ಕರ್ನಾಟಕ ಮೂಲದವರಾಗಿದ್ದು, ಮೃತ ಫಾತಿಮಾ ಮನೆ ಕೆಲಸ ಮಾಡುತ್ತಿದ್ದಳು. ಈಕೆ ಮೂವರು ಮಕ್ಕಳು ಮತ್ತು ಪತಿ ಅಕ್ರಮ್ ಜೊತೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಮೂವರು ಮಕ್ಕಳು ಸಾವಿತ್ರಿಬಾಯಿ ಫುಲೆ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದರು. ಜೀವನೋಪಾಯಕ್ಕಾಗಿ ಮತ್ತು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಲು ಇತ್ತೀಚೆಗೆ ಪುಣೆಯ ಪಿಂಪ್ರಿ-ಚಿಂಚ್‍ವಾಡ್ ಪ್ರದೇಶಕ್ಕೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಮಹಿಳೆಯ ಪತಿ ಅಕ್ರಮ್ ಭಾನುವಾರ ಸಂಜೆ ಮನೆಗೆ ಮರಳಿದಾಗ ಒಳಗಿನಿಂದ ಬಾಗಿಲು ಲಾಕ್ ಆಗಿತ್ತು. ಎಷ್ಟೆ ಬಡಿದರೂ ಬಾಗಿಲು ತೆರಯಲಿಲ್ಲ. ಇದರಿಂದ ಗಾಬರಿಗೊಂಡ ಅಕ್ರಮ್ ತಕ್ಷಣ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಬಾಗಿಲನ್ನು ಮುರಿದು ಒಳಗೆ ಹೋಗಿದ್ದಾರೆ. ಆಗ ಮೂವರು ಮಕ್ಕಳು ಮೃತಪಟ್ಟಿದ್ದು, ಫಾತಿಮಾ ಬೇರೆ ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ಪೊಲೀಸ್ ಅಧಿಕಾರಿ ಶಂಕರ್ ಅವತಡೆ ಹೇಳಿದ್ದಾರೆ.
Advertisement
ಪತಿ ಅಕ್ರಮ್ ಹಣ್ಣು ಮಾರಾಟಗಾರನಾಗಿದ್ದು, ಹೆಚ್ಚು ಹಣ ಸಂಪಾದಿಸುತ್ತಿರಲಿಲ್ಲ. ಜೊತೆಗೆ ಇತ್ತೀಚೆಗೆ ವ್ಯಾಪಾರದಲ್ಲಿ ಭಾರೀ ನಷ್ಟವನ್ನು ಅನುಭವಿಸಿದ್ದನು. ಈ ವಿಚಾರಕ್ಕೆ ಕೆಲವು ದಿನಗಳಿಂದ ದಂಪತಿಯ ಮಧ್ಯೆ ಜಗಳ ನಡೆಯುತಿತ್ತು. ಇತ್ತ ಫಾತಿಮಾ ತಂದೆ ಕೂಡ ಸಾವನ್ನಪ್ಪಿದ್ದು, ಫಾತಿಮಾ ಖಿನ್ನತೆಗೆ ಒಳಗಾಗಿದ್ದಳು. ಹೀಗಾಗಿ ಆರ್ಥಿಕ ಸಮಸ್ಯೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಸದ್ಯಕ್ಕೆ ನಾವು ಈ ಪ್ರಕರಣ ಕುರಿತು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮನೆಯಲ್ಲಿ ಯಾವುದೇ ಡೆತ್‍ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.