Districts
ಕೊಪ್ಪಳ: ಮಗುವಿನ ಶವ ಸಾಗಿಸಲು ಅಂಬುಲೆನ್ಸ್ ಇದ್ದರೂ ಜಿಲ್ಲಾಸ್ಪತ್ರೆಯಲ್ಲಿ ಪರದಾಡಿದ ತಾಯಿ

ಕೊಪ್ಪಳ: ತೀವ್ರ ಜ್ವರದಿಂದ ಬಳಲಿ ಮೃತಪಟ್ಟಿದ್ದ ಮಗುವಿನ ಶವವನ್ನು ಸಾಗಿಸಲು ತಾಯಿ ಶ್ರದ್ಧಾಂಜಲಿ ವಾಹನಕ್ಕಾಗಿ ಜಿಲ್ಲಾಸ್ಪತ್ರೆಯಲ್ಲಿ ಪರದಾಡಿದ್ದಾರೆ.
ಜಿಲ್ಲೆಯ ಗಂಗಾವತಿ ನಗರದ ನಿವಾಸಿಯಾಗಿರುವ ಮಮ್ತಾಜ್ ಜ್ವರದಿಂದ ಬಳಲುತ್ತಿದ್ದ ಒಂದು ವರ್ಷದ ಮಗು ಖಾಜಾವಲಿಯನ್ನ ಕೊಪ್ಪಳದ ಜಿಲ್ಲಾಸ್ಪತ್ರೆಗೆ ತಂದಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಮಗು ಸಾವನ್ನಪ್ಪಿದೆ ಅಂತ ಹೇಳಿದ್ದಾರೆ. ದಿಕ್ಕು ತೋಚದ ಪೋಷಕರು ಅಲ್ಲೆ ಅಳಲು ಆರಂಭಿಸಿದ್ದಾರೆ.
ಕಡು ಬಡತನವಿರು ಮಮ್ತಾಜ್ ಮಗುವಿನ ಶವ ಸಾಗಿಸಲು ಹಣವಿಲ್ಲದೆ ಆಸ್ಪತ್ರೆಯ ವಾಹನ ಕೇಳಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ವಾಹನ ಇಲ್ಲದೇ ಮೂರು ಗಂಟೆಗೂ ಹೆಚ್ಚು ಶವವಿಟ್ಟುಕೊಂಡು ರೋಧಿಸುತ್ತಾ ಕುಳಿತಿದ್ದಾರೆ. ಮಮ್ತಾಜ್ ರೋಧಿಸುತ್ತಿದ್ದರೂ ಅವರ ಸಹಾಯಕ್ಕೆ ಆಸ್ಪತ್ರೆಯ ಯಾವ ಸಿಬ್ಬಂದಿಯೂ ಬರಲಿಲ್ಲ.
ಈ ವಿಚಾರ ತಿಳಿದ ಪಬ್ಲಿಕ್ ಟಿವಿ ಮಗುವಿನ ಮೃತ ದೇಹವನ್ನು ಸಾಗಿಸಲು ವೈದ್ಯರನ್ನು ಸಂಪರ್ಕಿಸಿತ್ತು. ನಮ್ಮಲ್ಲಿ ಶವ ಸಾಗಿಸಲು ವಾಹನವಿದೆ. ಆದರೆ ಚಾಲಕ ಇಲ್ಲ ಎಂದು ಜಿಲ್ಲಾ ಸರ್ಜನ್ ಡಾ.ಎಸ್.ಬಿ.ದಾನರೆಡ್ಡಿ ಹೇಳಿದ್ದಾರೆ. ಕೊನೆಗೆ ಪಬ್ಲಿಕ್ ಟಿವಿಯೇ ಶವವನ್ನು ಸಾಗಿಸಲು ಮುಂದಾದಾಗ ಸರ್ಜನ್ ದಾನರೆಡ್ಡಿ ಖಾಸಗಿ ಆಸ್ಪತ್ರೆಯ ಅಂಬುಲೆನ್ಸ್ ತರಿಸಿ ಶವ ಸಾಗಿಸಿ ಕೊಟ್ಟಿದ್ದಾರೆ.
