Belgaum
ಮಕ್ಕಳಿಗೆ ಈಜು ಕಲಿಸಲು ತೆರಳಿದ್ದ ತಾಯಿ ಬಾವಿಯಲ್ಲಿ ಮುಳುಗಿ ಸಾವು

– ಇತ್ತ ಮೈಸೂರಿನಲ್ಲಿ ಕಾಲು ಜಾರಿ ನದಿಗೆ ಬಿದ್ದ ಯುವಕ
ಬೆಳಗಾವಿ/ಮೈಸೂರು: ಮಕ್ಕಳಿಗೆ ಈಜು ಕಲಿಸಲು ತೆರಳಿದ್ದ ತಾಯಿ ಬಾವಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನೇಜ ಗ್ರಾಮದಲ್ಲಿ ನಡೆದಿದೆ.
ಶಿಲ್ಪಾ ಚನ್ನಗೌಡರ (34) ಮೃತಪಟ್ಟ ತಾಯಿ. ಶಿಲ್ಪಾ ತನ್ನ ಮಕ್ಕಳಾದ ಸುಜಲ ಮತ್ತು ಸುದರ್ಶನನಿಗೆ ನೇಜ ಗ್ರಾಮದ ಹೊರವಲಯದಲ್ಲಿ ತೆರೆದ ಬಾವಿಯಲ್ಲಿ ಈಜು ಕಲಿಸುತ್ತಿದ್ದಳು. ಈ ವೇಳೆ ಶಿಲ್ಪಾ ಮೂರ್ಛೆ ತಪ್ಪಿದ್ದಾಳೆ. ಈಜುವಾಗ ಶಿಲ್ಪಾ ತಂಬಾಕು ಸೇವನೆ ಮಾಡಿದ್ದರಿಂದ ಮೂರ್ಛೆ ಹೋಗಿದ್ದಾಳೆ ಎಂದು ಹೇಳಲಾಗುತ್ತಿದೆ.
ತಾಯಿ ಮುಳುಗುತ್ತಿರುವುದನ್ನು ನೋಡಿದ ಮಕ್ಕಳು ಸಹಾಯಕ್ಕಾಗಿ ಕೂಗಾಡಿದ್ದಾರೆ. ಅಲ್ಲದೆ ತಾಯಿಯ ರಕ್ಷಣೆ ಮಾಡುವಂತೆ ಮಕ್ಕಳು ನೆರೆ ಹೊರೆಯವರನ್ನು ಬಾವಿಯ ಬಳಿ ಕರೆದುಕೊಂಡು ಬಂದಿದ್ದಾರೆ. ಜನರು ರಕ್ಷಣೆಗೆ ಬರುವಷ್ಟರಲ್ಲಿ ಶಿಲ್ಪಾ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾಳೆ. ಈ ಬಗ್ಗೆ ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕೂಡ್ಲೂರು ಗ್ರಾಮದ ಲಕ್ಷ್ಮಣತೀರ್ಥ ನದಿಯಲ್ಲಿ ನೀರು ತರಲು ಹೋಗಿದ್ದ ಯುವಕ ಮೃತಪಟ್ಟಿದ್ದಾನೆ. ಧನುಷ್ (19) ಮೃತ ಯುವಕನಾಗಿದ್ದು, ಬೆಂಗಳೂರಿನಲ್ಲಿ ಡಿಪ್ಲೋಮಾ ಓದುತ್ತಿದ್ದನು.
ಧನುಷ್ ತನ್ನ ಸೋದರಮಾವನ ತಿಥಿ ಕಾರ್ಯಕ್ಕೆ ಬಂದಿದ್ದನು. ನದಿ ತೀರದ ಸಮಾಧಿ ಸ್ವಚ್ಚಗೊಳಿಸಲು ನೀರು ತರಲು ಹೋಗಿದ್ದ ವೇಳೆ ಧನುಷ್ ಕಾಲು ಜಾರಿ ನದಿಗೆ ಬಿದ್ದಿದ್ದಾನೆ. ಈ ಬಗ್ಗೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
