ಕುಣಿಗಲ್: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Accident) ತಾಯಿ ಮತ್ತು ಮಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕುಣಿಗಲ್ ತಾಲ್ಲೂಕಿನ ಉರ್ಕೆಹಳ್ಳಿ ಬಳಿ ನಡೆದಿದೆ.
ಬೆಂಗಳೂರಿನ ನಿವಾಸಿಗಳಾದ ಜಯಮಾಲಾ (60) ಮತ್ತು ಅವರ ಮಗಳು ರಾಜೇಶ್ವರಿ (40) ಮೃತಪಟ್ಟ ದುರ್ದೈವಿಗಳು. ಕಾರಿನಲ್ಲಿದ್ದ ಮತ್ತಿಬ್ಬರಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೂಲತಃ ರಾಯಚೂರು ಜಿಲ್ಲೆಯವರಾದ ಜಯಮಾಲಾ ಅವರು ಕಳೆದ ಹಲವು ವರ್ಷಗಳಿಂದ ಮಗಳು ರಾಜೇಶ್ವರಿ ಜೊತೆ ಬೆಂಗಳೂರಿನಲ್ಲಿ ವಾಸವಾಗಿದ್ದರು. ರಾಜೇಶ್ವರಿ ಅವರ ಮಗ ಪ್ರೀತಮ್‌ನನ್ನು ಶ್ರವಣಬೆಳಗೊಳದ ವಸತಿ ಶಾಲೆಗೆ ಸೇರಿಸಲು ಇಂದು ಬೆಳಿಗ್ಗೆ ಇವರೆಲ್ಲರೂ ಬೆಂಗಳೂರಿನಿಂದ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಇದನ್ನೂ ಓದಿ: ದಪ್ಪ ಆಗಿದ್ದೀಯಾ, ನಿನಗೆ ಮಗು ಆಗಲ್ಲ ಅಂತ ಗಂಡ ಕಿರುಕುಳ – ಬೇಸತ್ತು ಗೃಹಿಣಿ ಆತ್ಮಹತ್ಯೆ
ಅಪಘಾತದಲ್ಲಿ ಕಾರು ಚಾಲಕ ಮಾರುತಿ ಹಾಗೂ ರಾಜೇಶ್ವರಿ ಅವರ ಮಗ ಪ್ರೀತಮ್ ಅವರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

