– ಆಹಾರವಿಲ್ಲದೇ ಹುಲ್ಲು ತಿನ್ನುತ್ತಿರುವ ದೇಶದ ಜನತೆಗೆ ಮತ್ತೊಂದು ಶಾಕ್
ಕೈರೋ: ಸುಡಾನ್‌ನ ಪಶ್ಚಿಮ ಡಾರ್ಫರ್ ಪ್ರದೇಶದಲ್ಲಿ ಸಂಭವಿಸಿದ ಭಾರಿ ಭೂಕುಸಿತವು ಇಡೀ ಗ್ರಾಮವನ್ನು ನೆಲಸಮಗೊಳಿಸಿದೆ. ಭೂಕುಸಿತವು 1,000 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಅವಘಡದಲ್ಲಿ ಬದುಕುಳಿದಿದ್ದು ಮಾತ್ರ ಒಬ್ಬನೇ ಒಬ್ಬ ವ್ಯಕ್ತಿ.
ಮರ್ರಾ ಪರ್ವತಗಳಲ್ಲಿರುವ ತಾರಾಸಿನ್ ಗ್ರಾಮ ಭೂಕುಸತಕ್ಕೆ ಬಲಿಯಾಗಿದೆ. ಗ್ರಾಮದಲ್ಲಿ ಕೆಲ ದಿನಗಳಿಂದ ಭಾರೀ ಪ್ರಮಾಣದಲ್ಲಿ ಮಳೆಯಾಗಿತ್ತು. ಅದರ ಬೆನ್ನಲ್ಲೇ ಈ ದುರಂತ ಸಂಭವಿಸಿದೆ ಎಂದು ಸುಡಾನ್ ಲಿಬರೇಶನ್ ಮೂವ್‌ಮೆಂಟ್/ಆರ್ಮಿ (ಎಸ್‌ಎಲ್‌ಎಂ) ತಿಳಿಸಿದೆ.
ಭೂಕುಸಿತದ ಪರಿಣಾಮ ಇಡೀ ಹಳ್ಳಿಯೇ ಭೂಸಮಾಧಿಯಾಗಿದೆ. 1,000ಕ್ಕೂ ಹೆಚ್ಚು ಜನರು ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಒಬ್ಬ ಮಾತ್ರ ಬದುಕುಳಿದಿದ್ದಾನೆ ಎನ್ನಲಾಗಿದೆ.
ಮಣ್ಣು ಮತ್ತು ಅವಶೇಷಗಳ ಅಡಿಯಲ್ಲಿ ಇನ್ನೂ ಹೂತುಹೋಗಿರುವ ಸತ್ತವರನ್ನು ಹೊರತೆಗೆಯಲು ಸಹಾಯ ಮಾಡುವಂತೆ ವಿಶ್ವಸಂಸ್ಥೆ ಮತ್ತು ಇತರ ನೆರವು ಸಂಸ್ಥೆಗಳಿಗೆ ಮನವಿ ಮಾಡಲಾಗಿದೆ. ಸುಡಾನ್ ಸೈನ್ಯ ಮತ್ತು ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳ (RSF) ನಡುವಿನ ರಕ್ತಸಿಕ್ತ ಅಂತರ್ಯುದ್ಧದಲ್ಲಿ ಸಿಲುಕಿಕೊಂಡಿದೆ. ಇದು ದೇಶವನ್ನು ವಿಶ್ವದ ಅತ್ಯಂತ ಹೀನಾಯ ಮಾನವೀಯ ಬಿಕ್ಕಟ್ಟಿನಲ್ಲಿ ಮುಳುಗಿಸಿದೆ.
2023ರಲ್ಲಿ ಎರಡೂ ಬಣಗಳ ನಡುವೆ ಆಂತರಿಕ ಸಂಘರ್ಷ ಶುರುವಾಯಿತು. ಇಲ್ಲಿವರೆಗೆ 4000ಕ್ಕೂ ಹೆಚ್ಚು ಜನರು ಸಂಘರ್ಷಕ್ಕೆ ಬಲಿಯಾಗಿದ್ದಾರೆ. ತಿನ್ನಲು ಆಹಾರವಿಲ್ಲದೇ ಜನರು ಹುಲ್ಲು ತಿನ್ನುವ ದುಸ್ಥಿತಿ ದೇಶದಲ್ಲಿ ತಲೆದೋರಿದೆ.
 


 
		 
		 
		 
		 
		
 
		 
		 
		 
		