ಮೋರ್ಬಿ ಸೇತುವೆ ದುರಂತ, 9 ಮಂದಿ ಅರೆಸ್ಟ್‌ – ಟೆಂಡರ್‌ ಪಡೆದು ಇನ್ನೊಂದು ಕಂಪನಿಯಿಂದ ರಿಪೇರಿ

Public TV
3 Min Read
morbi bridge collapse

ಗಾಂಧಿನಗರ: ಗುಜರಾತ್‍ನ(Gujarat)ಮೋರ್ಬಿ ಪಟ್ಟಣದಲ್ಲಿದ್ದ ಪುರಾತನ ತೂಗುಸೇತುವೆ(Morbi Bridge Collapse) ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿಯನ್ನು ಬಂಧಿಸಲಾಗಿದೆ.

ತೂಗು ಸೇತುವೆಯನ್ನು ನವೀಕರಿಸಿದ್ದ ಒರೆವಾ(Oreva) ಕಂಪನಿಯ ಅಧಿಕಾರಿಗಳು, ಟಿಕೆಟ್‌ ಮಾರಾಟ ಮಾಡಿದ್ದ ವ್ಯಕ್ತಿ ಮತ್ತು ಭದ್ರತಾ ಸಿಬ್ಬಂದಿಯನ್ನು ಬಂಧಿಸಲಾಗಿದೆ.

ಮೊರ್ಬಿ ಪೊಲೀಸ್‌ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 304(ಕೊಲೆಯೆಂದು ಪರಿಗಣಿಸಲಾದ ಅಪರಾಧಿಕ ಮಾನವ ಹತ್ಯೆ), 308(ಮಾನವ ಹತ್ಯೆ ಮಾಡಲು ಪ್ರಯತ್ನ), 114( ಅಪರಾಧಕ್ಕೆ ದುಷ್ಪ್ರೇರಕನ ಹಾಜರಿ) ಅಡಿ ಎಫ್‌ಐಆರ್‌ ದಾಖಲಾಗಿದೆ.

Gujarat Bridge

ಈ ವರ್ಷದ ಮಾರ್ಚ್‌ ತಿಂಗಳಿನಲ್ಲಿ ಮೊರ್ಬಿ ನಗರಸಭೆ ವಾಚ್‌ ತಯಾರಕಾ ಸಂಸ್ಥೆ ಒರೆವಾ(ಅಜಂತಾ ಮಾನ್ಯುಫ್ಯಾಕ್ಷರಿಂಗ್‌ ಪ್ರೈವೆಟ್‌ ಲಿಮಿಟೆಡ್‌) ಜೊತೆ 15 ವರ್ಷಗಳ ಕಾಲ ಒಪ್ಪಂದಕ್ಕೆ ಸಹಿ ಹಾಕಿತ್ತು. ಸರ್ಕಾರದ ಟೆಂಡರ್‌ ಪಡೆದ ಒರೆವಾ ಕಂಪನಿ ಸೇತುವೆ ದುರಸ್ತಿ ಕೆಲಸವನ್ನು ಯಾವುದೇ ದಾಖಲೆಗಳಿಲ್ಲದ ದೇವಪ್ರಕಾಶ್‌ ಸೊಲ್ಯೂಷನ್‌ ಸಂಸ್ಥೆಗೆ ನೀಡಿತ್ತು.

8 ರಿಂದ 12 ತಿಂಗಳ ಕಾಲ ಸೇತುವೆಯನ್ನು ಮುಚ್ಚಿ ದುರಸ್ತಿ ಮಾಡಬೇಕೆಂದು ಒಪ್ಪಂದದಲ್ಲಿ ಸೂಚಿಸಲಾಗಿತ್ತು. ಹೀಗಿದ್ದರೂ ಕೇವಲ 5 ತಿಂಗಳಿನಲ್ಲಿ ನವೀಕರಣಗೊಂಡು ಅ.26 ರಂದು ಸೇತುವೆಯನ್ನು ಸಾರ್ವಜನಿಕರಿಗೆ ತೆರೆಯಲಾಗಿತ್ತು. ಷರತ್ತು ಉಲ್ಲಂಘಿಸಿ ಸಂಸ್ಥೆ ಬೇಜವಾಬ್ದಾರಿ ಮತ್ತು ಅಸಡ್ಡೆ ವರ್ತನೆ ತೋರಿದೆ ಎಂದು ಎಫ್‌ಐಆರ್‌ ದಾಖಲಾಗಿದೆ. ಹೀಗಿದ್ದರೂ ಎಫ್‌ಐಆರ್‌ನಲ್ಲಿ ಪೊಲೀಸರು ಯಾರ ಹೆಸರನ್ನು ಉಲ್ಲೇಖಿಸಿಲ್ಲ. ಇದನ್ನೂ ಓದಿ: 15-20 ಹುಡುಗರು ಉದ್ದೇಶಪೂರ್ವಕವಾಗಿ ಮೋರ್ಬಿ ಸೇತುವೆಯನ್ನು ಅಲುಗಾಡಿಸಿದ್ದೆ ದುರಂತಕ್ಕೆ ಕಾರಣ: ಪ್ರತ್ಯಕ್ಷದರ್ಶಿ

Gujarat 3

ಭಾನುವಾರ ಸುಮಾರು 500 ಮಂದಿಗೆ 17 ರೂ. ದರದಲ್ಲಿ ಟಿಕೆಟ್‌ ಮಾರಾಟ ಮಾಡಲಾಗಿದೆ. ಈ ಸೇತುವೆ 125 ಮಂದಿಯ ತೂಕವನ್ನು ಮಾತ್ರ ತಡೆದುಕೊಳ್ಳವ ಸಾಮರ್ಥ್ಯ ಹೊಂದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದ ಕಾರಣ ಸೇತುವೆ ಮುರಿದು ಬಿದ್ದಿದೆ. 2037ರ ವರೆಗೆ ಪ್ರತಿ ವರ್ಷ ಟಿಕೆಟ್‌ ದರವನ್ನು ಏರಿಸಲು ಕಂಪನಿಗೆ ಅನುಮತಿ ನೀಡಲಾಗಿತ್ತು.

ಈ ಸೇತುವೆ ನವೀಕರಣಗೊಂಡ ಬಳಿಕ ಮಾತನಾಡಿದ್ದ ಒರೆವಾ ಕಂಪನಿಯ ಆಡಳಿತ ನಿರ್ದೇಶಕ ಜಯಸುಖ್‌ಭಾಯ್‌ ಪಟೇಲ್‌, 2 ಕೋಟಿ ರೂ. ವೆಚ್ಚದಲ್ಲಿ ಶೇ.100 ರಷ್ಟು ನವೀಕರಣ ಮಾಡಲಾಗಿದೆ. ಅಷ್ಟೇ ಅಲ್ಲದೇ ಈ ಸೇತುವೆ 8 ರಿಂದ 10 ವರ್ಷ ಕಾಲ ಬಾಳಿಕೆ ಬರಲಿದೆ ಎಂದು ತಿಳಿಸಿದ್ದರು.

ಸಾವಿನ ಸಂಖ್ಯೆ 141ಕ್ಕೆ ಏರಿಕೆ:
ಸೇತುವೆ ದುರಂತಕ್ಕೆ ಬಲಿಯಾದವರ ಸಂಖ್ಯೆ 141ಕ್ಕೆ ಏರಿಕೆ ಆಗಿದೆ. ಬ್ರಿಟೀಷರ ಕಾಲದಲ್ಲಿ ನಿರ್ಮಾಣಗೊಂಡಿದ್ದ ತೂಗುಸೇತುವೆ ಗುಜರಾತ್‍ನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿತ್ತು. ಇದನ್ನೂ ಓದಿ: ಕೋಲ್ಕತ್ತಾ ಫ್ಲೈಓವರ್ ಕುಸಿದಾಗ ಬ್ಯಾನರ್ಜಿಯನ್ನು ನಿಂದಿಸಿದ್ದ ನೀವು ಇದಕ್ಕೆ ಏನ್ ಹೇಳ್ತೀರಿ: ಮೋದಿ ವಿರುದ್ಧ ವಿಪಕ್ಷಗಳು ಕಿಡಿ

19ನೇ ಶತಮಾನದಲ್ಲಿ ಯುರೋಪ್ ತಂತ್ರಜ್ಞಾನ ಬಳಸಿ ಮಚ್ಚು ನದಿ ಮೇಲೆ ನಿರ್ಮಿಸಿದ್ದ ಈ ತೂಗು ಸೇತುವೆಯನ್ನು ಕಲಾತ್ಮಕ ಮತ್ತು ಸಾಂಕೇತಿಕ ಅದ್ಭುತ ಎಂದೇ ಕರೆಯಲಾಗುತ್ತಿತ್ತು. 1.25 ಮೀಟರ್ ಅಗಲ, 233 ಮೀಟರ್ ಉದ್ದದ ಈ ಸೇತುವೆ ಶಿಥಿಲಗೊಂಡಿದ್ದ ಕಾರಣ ಮಾರ್ಚ್‍ನಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು.  ಗುಜರಾತಿಗಳ ಹೊಸವರ್ಷವಾದ ಅಕ್ಟೋಬರ್ 26ಕ್ಕೆ ಇದು ಮರು ಲೋಕಾರ್ಪಣೆಗೊಂಡಿತ್ತು. ಹೀಗಾಗಿಯೇ ಪ್ರವಾಸಿಗರು ದೊಡ್ಡ ಮಟ್ಟದಲ್ಲಿ ಭಾನುವಾರ ಹರಿದು ಬಂದಿದ್ದರು.

ರಾಜ್‍ಕೋಟ್‍ನ ಬಿಜೆಪಿ ಸಂಸದ ಮೋಹನ್‍ಬಾಯ್ ಕುಂದಾರಿಯಾ ಸಹೋದರಿ ಕುಟುಂಬದ 12 ಸದಸ್ಯರು ಸೇರಿ 141 ಮಂದಿ ಈ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. 56 ಮಕ್ಕಳು ಸಹ ಮೃತಪಟ್ಟಿದ್ದಾರೆ. 200ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ. ಭಾರತೀಯ ಸೇನೆಯ ಮೂರು ಪಡೆಗಳು, ಎನ್‍ಡಿಆರ್‌ಎಫ್, ಅಗ್ನಿಶಾಮಕ ಪಡೆಗಳು ಸೇರಿ ರಕ್ಷಣಾ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಂಭವ ಇದೆ. ಎಲ್ಲಿ ನೋಡಿದರೂ ಸ್ಮಶಾನ ಸದೃಶ ವಾತಾವರಣವೇ ಕಂಡುಬರುತ್ತಿದೆ. ಇನ್ನೂ ನೂರಕ್ಕೂ ಹೆಚ್ಚು ಮಂದಿ ಪತ್ತೆಯಾಗಬೇಕಿದೆ. ತಮ್ಮವರನ್ನು ಕಾಣದೇ ಸಂಬಂಧಿಕರು ಆತಂಕದಲ್ಲಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *