ಹುಬ್ಬಳ್ಳಿ: ದೇಶಾದ್ಯಂತ ಲಾಕ್‍ಡೌನ್ ಜಾರಿಯಿರುವ ಹಿನ್ನೆಲೆ ಜನರು ಆಹಾರಕ್ಕಾಗಿ ಪರದಾಡುವಂತ ಸ್ಥಿತಿಯನ್ನು ನೋಡಿದ್ದೇವೆ. ಜನರ ನೆರವಿಗೆ ಸಾಕಷ್ಟು ಮಂದಿ ಮುಂದೆ ಬಂದಿದ್ದಾರೆ. ಆದರೇ ಮೂಕ ಪ್ರಾಣಿಗಳು ಕೂಡ ಆಹಾರವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದು, ತಾಯಿ ಮಂಗವೊಂದು ತನ್ನ ಮರಿ ಪಾಲನೆಗೆ ತುತ್ತು ಆಹಾರಕ್ಕಾಗಿ ಪರಿತಪಿಸುತ್ತಿರುವ ದೃಶ್ಯ ಮನಕಲಕುವಂತಿದೆ.
Advertisement
ತಾಯಿ ಮಂಗವೊಂದು ತನ್ನ ಪುಟ್ಟ ಮರಿಗಾಗಿ ಆಹಾರ ಹುಡುಕಿಕೊಂಡು ಆಹಾರ ಅರಸಿ ಸಾಗುತ್ತಿರುವ ದೃಶ್ಯ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯಲ್ಲಿ ಕಂಡುಬಂದಿದೆ. ಅರಣ್ಯ ಹಾಗೂ ಉದ್ಯಾನವನಗಳಲ್ಲಿ ಆಹಾರ ಪಡೆದುಕೊಂಡು ಜೀವನ ನಡೆಸುತ್ತಿದ್ದ ಮಂಗಗಳು ಈಗ ಎಲ್ಲಿಯೂ ಕೂಡ ಆಹಾರವಿಲ್ಲದೆ ಪರದಾಡುವಂತಾಗಿದೆ. ಲಾಕ್‍ಡೌನ್ ಬಿಸಿ ಮನುಷ್ಯನಿಗೆ ಮಾತ್ರವಲ್ಲದೆ ಪ್ರಾಣಿಗಳಿಗೂ ತಟ್ಟಿದ್ದು, ಆಹಾರ ಅರಸಿಕೊಂಡು ಮಂಗಗಳು ನಗರದತ್ತ ಮುಖ ಮಾಡಿವೆ. ಕಾಲೋನಿಗಳಲ್ಲಿ ಜನರು ಹಾಕುತ್ತಿದ್ದ ಅಳಿದು ಉಳಿದ ಆಹಾರವನ್ನು ನೆಚ್ಚಿಕೊಂಡು ಜೀವನಕ್ಕೆ ದಾರಿ ಮಾಡಿಕೊಂಡಿರುವ ಮಂಗಗಳು ಈಗ ಆಹಾರವಿಲ್ಲದೆ ಸಂಕಷ್ಟದ ಸುಳಿಯಲ್ಲಿ ಸಿಲುಕಿಕೊಂಡಿವೆ. ಜನರಿಗೆ ಆಹಾರವಿಲ್ಲದಿದ್ದರೆ ಕಷ್ಟವನ್ನು ಹೇಳಿಕೊಂಡು ಆಹಾರ ಪಡೆಯುತ್ತಾರೆ. ಆದರೇ ಮೂಕ ಪ್ರಾಣಿಗಳ ರೋಧನ ಹೇಳ ತೀರದಾಗಿದೆ.
Advertisement
Advertisement
ತುತ್ತು ಆಹಾರಕ್ಕಾಗಿ ಮಂಗಗಳು ಪಡುತ್ತಿರುವ ಕಷ್ಟ ಮನಕಲಕುವಂತಿದೆ. ಅದರಲ್ಲೂ ತಾಯಿ ಮಂಗವೊಂದು ತನ್ನ ಪುಟ್ಟ ಕಂದಮ್ಮನನ್ನು ಉದರದಲ್ಲಿ ಹೊತ್ತಿಕೊಂಡು ಆಹಾರವನ್ನು ಹುಡುಕುತ್ತಿರುವ ದೃಶ್ಯ, ಸ್ಥಳದಲ್ಲಿ ಬಿಸಾಡಿದ ಹಾಲಿನ ಪ್ಯಾಕೆಟ್‍ನಲ್ಲಿ ಉಳಿದ ಹಾಲನ್ನು ಮಂಗ ಕುಡಿಯುತ್ತಿರುವುದು, ನೆಲದಲ್ಲಿ ಚೆಲ್ಲಿದ ಹಾಲನ್ನು ಮಂಗಗಳು ಕುಡಿಯುತ್ತಿರುವುದು, ಕಸದ ರಾಶಿಯಲ್ಲಿ ಸಿಕ್ಕ ಅಲ್ಪಸ್ವಲ್ಪ ಆಹಾರವನ್ನು ಆರಿಸಿ ತಿನ್ನುತ್ತಿರುವ ಮಂಗಗಳ ದೃಶ್ಯಗಳನ್ನು ನೋಡಿದರೆ ಕಣ್ಣಂಚಲ್ಲಿ ನೀರು ತುಂಬುತ್ತದೆ.