ರಿಮ್ಸ್ ಆಸ್ಪತ್ರೆಯಲ್ಲಿ ಮಂಗಗಳ ಕಾಟ – ಹೈರಾಣಾದ ಒಳರೋಗಿಗಳು

Public TV
1 Min Read
RIMS Hospital Monkey

ರಾಯಚೂರು: ಕಳೆದ ಕೆಲ ತಿಂಗಳುಗಳಿಂದ ರಾಯಚೂರಿನ (Raichur) ಪ್ರತಿಷ್ಠಿತ ರಿಮ್ಸ್ (RIMS) ವೈದ್ಯಕೀಯ ವಿಜ್ಞಾನಗಳ ಬೋಧಕ ಆಸ್ಪತ್ರೆಯಲ್ಲಿ ಮಂಗಗಳ (Monkey) ಕಾಟ ಜೋರಾಗಿದೆ. ನಾಯಿ, ಹಂದಿಗಳ ಹಾವಳಿಗೆ ಹೇಗೋ ಬ್ರೇಕ್ ಹಾಕಿರುವ ರಿಮ್ಸ್ ಸಿಬ್ಬಂದಿ ಮಂಗಗಳ ಹಾವಳಿ ತಡೆಯಲು ಮಾತ್ರ ಸಾಧ್ಯವಾಗಿಲ್ಲ.

RIMS Hospital Monkey 1

ಆಹಾರ ಅರಸಿ ಆಸ್ಪತ್ರೆಗೆ ನುಗ್ಗುವ ಕೋತಿಗಳು ಡಸ್ಟ್ ಬಿನ್‌ನ ತ್ಯಾಜ್ಯ ಚಲ್ಲಾಪಿಲ್ಲಿ ಮಾಡಿ, ಎಲ್ಲೆಂದರಲ್ಲಿ ಓಡಾಡಿ ರೋಗಿಗಳನ್ನು ಹೆದರಿಸುತ್ತಿವೆ. ನವಜಾತ ಶಿಶುಗಳು, ಬಾಣಂತಿಯರು ಇರೋ ವಾರ್ಡ್‌ಗಳ ಬಳಿಯೂ ಕೋತಿಗಳು ನುಗ್ಗುತ್ತಿರುವುದರಿಂದ ಆತಂಕ ಹೆಚ್ಚಾಗಿದೆ. ವಾರ್ಡ್‌ಗಳಿಗೆ ನುಗ್ಗಿ ಜನರನ್ನು ಹೆದರಿಸಿ ಊಟ, ತಿಂಡಿ ಕಿತ್ತಿಕೊಳ್ಳುವುದು ಸಾಮಾನ್ಯವಾಗಿದೆ. ಇದನ್ನೂ ಓದಿ: ಊರಿಗೆ ಹೋಗಲು ನಿಲ್ದಾಣದಲ್ಲಿ ಕಾದು ಸುಸ್ತಾಗಿ ತಾನೇ ಸರ್ಕಾರಿ ಬಸ್ ಚಲಾಯಿಸಿದ ಭೂಪ!

ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ. ನಗರಸಭೆ ಸಹ ಮಂಗಗಳನ್ನು ಹಿಡಿಯುವ ಕೆಲಸಕ್ಕೆ ಮುಂದಾಗಿಲ್ಲ. ಹೀಗಾಗಿ ಪಟಾಕಿ ಹೊಡೆದು ಸಾಧ್ಯವಾದಷ್ಟು ಮಂಗಗಳನ್ನು ಓಡಿಸುತ್ತಿದ್ದೇವೆ, ಆದರೂ ಬರುತ್ತಲೇ ಇವೆ ಎಂದು ರಿಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ರೋಗಿಗಳು ಹಾಗೂ ರೋಗಿಗಳ ಕಡೆಯವರು ಮಾತ್ರ ಮಂಗಗಳ ಕಾಟಕ್ಕೆ ಹೆದರಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯುವ ಮುನ್ನ ಮಂಗಗಳ ಹಾವಳಿಗೆ ಬ್ರೇಕ್ ಹಾಕಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ದೇವದುರ್ಗದ ಶಾಸಕಿಗೆ ನಿಂದಿಸಿ, ಚಪ್ಪಲಿ ಎಸೆದು, ಕೊಲೆ ಬೆದರಿಕೆ ಆರೋಪ – 8 ಜನರ ವಿರುದ್ಧ ಪ್ರಕರಣ

Share This Article