ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ (Money Laundering Case) ಆರೋಪಿಯಾಗಿರುವ ಸದ್ಯ ಜಾಮೀನು (Bail) ಪಡೆದುಕೊಂಡಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಅವರಿಗೆ ವಿದೇಶ ಪ್ರವಾಸಕ್ಕೆ ದೆಹಲಿ ನ್ಯಾಯಾಲಯ (Delhi Court) ಅನುಮತಿ ನೀಡಿದೆ. ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ದೆಹಲಿ ವಿಶೇಷ ನ್ಯಾಯಾಧೀಶ ವಿಕಾಸ್ ಧುಲ್ ಅವರು ನವೆಂಬರ್ 29 ರಿಂದ ಡಿಸೆಂಬರ್ 3 ರವರೆಗೆ ದುಬೈಗೆ (Dubai) ಪ್ರಯಾಣಿಸಲು ಅನುಮತಿ ನೀಡಿದರು.
ದುಬೈನಲ್ಲಿ ನಡೆಯಲಿರುವ COP28 ಸ್ಥಳೀಯ ಹವಾಮಾನ ಆಕ್ಷನ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಡಿ.ಕೆ ಶಿವಕುಮಾರ್ ಅವರನ್ನು COP28 ಅಧ್ಯಕ್ಷ-ನಿಯೋಜಿತ ಹಿಸ್ ಎಕ್ಸಲೆನ್ಸಿ ಡಾ ಸುಲ್ತಾನ್ ಅಹ್ಮದ್ ಅಲ್ ಜಾಬರ್ ಮತ್ತು ಹವಾಮಾನ ಮಹತ್ವಾಕಾಂಕ್ಷೆ ಮತ್ತು ಪರಿಹಾರದ ಕುರಿತ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ವಿಶೇಷ ಪ್ರತಿನಿಧಿ ಮೈಕೆಲ್ ಆರ್ ಬ್ಲೂಮ್‌ಬರ್ಗ್ ಅವರು ಆಹ್ವಾನಿಸಿದ್ದಾರೆ. ಇದು ವಿಶ್ವಸಂಸ್ಥೆಯು ಆಯೋಜಿಸುವ ವಾರ್ಷಿಕ ಅಂತರಾಷ್ಟ್ರೀಯ ಹವಾಮಾನ ಶೃಂಗಸಭೆಯಾಗಿದೆ.
ಭಾರತದ ಸಂವಿಧಾನದ 21ನೇ ವಿಧಿಯ ಪ್ರಕಾರ ವಿದೇಶಕ್ಕೆ ಪ್ರಯಾಣಿಸುವ ಹಕ್ಕು ವೈಯಕ್ತಿಕ ಸ್ವಾತಂತ್ರ್ಯದ ಭಾಗವಾಗಿದೆ. ಆರೋಪಿಯು ತಲೆಮರೆಸಿಕೊಳ್ಳುವ ಸಾಧ್ಯತೆಯಿದೆ ಮತ್ತು ವಿಚಾರಣೆಯನ್ನು ಎದುರಿಸಲು ಲಭ್ಯವಿಲ್ಲ ಎಂದು ಕಂಡು ಬಂದರೆ ಮಾತ್ರ ತನಿಖೆ ಅಥವಾ ವಿಚಾರಣೆಯ ಸಮಯದಲ್ಲಿ ಅರೋಪಿಯ ಹಕ್ಕನ್ನು ನಿರ್ಬಂಧಿಸಬಹುದು ಎಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ಹೇಳಿದರು. ಇದನ್ನೂ ಓದಿ: 4ನೇ ತರಗತಿ ವಿದ್ಯಾರ್ಥಿಗೆ ಕೈವಾರದಿಂದ 108 ಬಾರಿ ಚುಚ್ಚಿದ ಸಹಪಾಠಿಗಳು
ಕರ್ನಾಟಕದಿಂದ ಎಂಟು ಬಾರಿ ಶಾಸಕರಾಗಿದ್ದಾರೆ ಪ್ರಸ್ತುತ ಅವರು ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಗಮನಿಸಿದ ನ್ಯಾಯಾಧೀಶರು, ಅವರು ಭಾರತದಿಂದ ಪಲಾಯನ ಮಾಡುವ ಸಾಧ್ಯತೆ ತುಂಬಾ ವಿರಳ ಎಂದು ಹೇಳಿದರು. ಅರ್ಜಿದಾರರ ಅರ್ಜಿಯನ್ನು ಅನುಮತಿಸಲು ಯಾವುದೇ ಅಡ್ಡಿಯಿಲ್ಲ. ಆದ್ದರಿಂದ ವಿದೇಶ ಪ್ರಯಾಣಕ್ಕೆ ಅನುಮತಿ ಕೋರಿ ಶಿವಕುಮಾರ್ ಸಲ್ಲಿಸಿದ ಅರ್ಜಿಯನ್ನು ಅನುಮತಿಸಲಾಗಿದೆ ಮತ್ತು ನವೆಂಬರ್ 29, 2023 ರಿಂದ ಡಿಸೆಂಬರ್ 3 ರವರೆಗೆ ಜಾರಿಗೆ ಬರುವಂತೆ ದುಬೈಗೆ ಪ್ರಯಾಣಿಸಲು ಅವರಿಗೆ ಅನುಮತಿ ನೀಡಲಾಗಿದೆ.
ನ್ಯಾಯಾಧೀಶರು ಆರೋಪಿಗೆ ಹಲವಾರು ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿದ್ದಾರೆ. ಪ್ರಯಾಣದ ಮೊದಲು ನ್ಯಾಯಾಲಯದ ಮುಂದೆ ಅವರ ಹೆಸರಿನಲ್ಲಿ 5 ಲಕ್ಷ ರೂ. ಎಫ್‌ಡಿಆರ್ ಅನ್ನು ಒದಗಿಸಬೇಕು ಮತ್ತು ಅವರ ಸಂಪೂರ್ಣ ಪ್ರಯಾಣದ ವಿವರವನ್ನು ದೂರವಾಣಿ ಅಥವಾ ಮೊಬೈಲ್ ಸಂಖ್ಯೆಯೊಂದಿಗೆ ಸಲ್ಲಿಸಬೇಕು. ಆರೋಪಿಗಳು ವಿದೇಶಕ್ಕೆ ಪ್ರಯಾಣಿಸುವಾಗ ಯಾವುದೇ ಸಹ-ಆರೋಪಿಗಳನ್ನು ಸಂಪರ್ಕಿಸಲು ಪ್ರಯತ್ನಿಸಬಾರದು ಅಥವಾ ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಬಾರದು ಎಂದು ನ್ಯಾಯಾಧೀಶರು ಷರತ್ತು ವಿಧಿಸಿದ್ದಾರೆ.
ಶಿವಕುಮಾರ್ ಅವರಿಗೆ 2019ರ ಅಕ್ಟೋಬರ್ 23 ರಂದು ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ನ್ಯಾಯಾಲಯದ ಅನುಮತಿಯಿಲ್ಲದೆ ಅವರು ದೇಶವನ್ನು ತೊರೆಯಬಾರದು ಎಂಬ ಷರತ್ತು ವಿಧಿಸಿತ್ತು. ಈಗಾಗಲೇ ತನಿಖೆ ಪೂರ್ಣಗೊಂಡಿದ್ದು ನ್ಯಾಯಾಲಯಕ್ಕೆ ಪ್ರಾಸಿಕ್ಯೂಷನ್ ದೂರು ಸಲ್ಲಿಸಲಾಗಿದೆ ಎಂದು ಮನವಿಯಲ್ಲಿ ಸಲ್ಲಿಸಲಾಗಿದೆ.