ಬೆಂಗಳೂರು: ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮೊಹಮ್ಮದ್ ನಲಪಾಡ್ ಇಂದು ಅಧಿಕಾರ ಸ್ವೀಕರಿಸಿದ್ದಾರೆ.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ನೂತನ ಕಚೇರಿಯಲ್ಲಿ ಅಧಿಕಾರ ಸ್ವೀಕಾರ ಕಾರ್ಯಕ್ರಮ ನಡೆಯಿತು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಧಿಕಾರ ಸ್ವೀಕಾರ ಕಾರ್ಯಕ್ರಮ ಮಾದರಿಯಲ್ಲೇ ಇಂದಿನ ವೇದಿಕೆ ಕಾರ್ಯಕ್ರಮ ರೂಪುರೇಷೆ ಇತ್ತು. ಡಿಕೆಶಿ ಅಧಿಕಾರ ಸ್ವೀಕಾರಕ್ಕೆ ಪ್ರತಿಜ್ಞಾ ದಿನ ಎಂದು ನಾಮಕರಣ ಮಾಡಲಾಗಿತ್ತು. ನಲಪಾಡ್ ಅಧಿಕಾರ ಸ್ವೀಕಾರಕ್ಕೆ ಯುವ ಪ್ರತಿಜ್ಞಾ ದಿನ ಎಂದು ನಾಮಕರಣ ಮಾಡಲಾಗಿತ್ತು. ನಲಪಾಡ್‍ಗೆ ಪ್ರತಿಜ್ಞಾ ವಿಧಿ ಭೋದಿಸಬೇಕಿದ್ದ ನಿರ್ಗಮಿತ ಅಧ್ಯಕ್ಷ ರಕ್ಷಾ ರಾಮಯ್ಯ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಹಾಗಾಗಿ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಪ್ರತಿಜ್ಞಾ ವಿಧಿ ಭೋದಿಸಿದರು. ಇದನ್ನೂ ಓದಿ: ಹಿಜಬ್ ನಮ್ಮ ಕುಟುಂಬದ ವಿವಾದ ಪಾಕಿಸ್ತಾನ ತಲೆಹಾಕಬಾರದು: ಫಾತಿಮಾ ಹುಸೇನ್ ಆಕ್ರೋಶ
ಬಳಿಕ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ನಲಪಾಡ್, ಈ ಒಂದು ದಿನಕ್ಕೆ ಸತತ ಒಂದು ವರ್ಷಗಳಿಂದ ಹೋರಾಟ ಮಾಡಿದ್ದೇನೆ. ನಾನು ಇಲ್ಲಿಯವರೆಗೂ ಒಂದು ಕೆಟ್ಟದ್ದು ಬಯಸಿಲ್ಲ. ನಾನು ರಾಹುಲ್ ಗಾಂಧಿ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಯುವಕರ ಧ್ವನಿಯಾಗಬೇಕೆಂದು ಒಂದು ವರ್ಷದಿಂದ ಛಲ ಇತ್ತು ಅದು ಇಂದು ಈಡೇರಿದೆ. ಯೂತ್ ಕಾಂಗ್ರೆಸ್‍ಅನ್ನು ಉತ್ತಮ ಹಾದಿಯಲ್ಲಿ ಕೊಂಡೊಯ್ಯಬೇಕು ಎಂಬ ಯೋಚನೆ ಮಾಡುತ್ತಿದ್ದೇನೆ ಎಂದರು. ಇದನ್ನೂ ಓದಿ: ಮೋದಿಗೆ ನಾನು ಹೆದರೋಲ್ಲ, ಅವರ ಸೊಕ್ಕು ನೋಡಿ ನಗು ಬರುತ್ತೆ: ರಾಹುಲ್ ಗಾಂಧಿ
ನಾವು ಈಗ ಯುದ್ದೋಪಾದಿಯಲ್ಲಿ ಕೆಲಸ ಮಾಡಬೇಕಿದೆ. ನಾನು ಹಿಂದೆ ಒಂದು ತಪ್ಪು ಮಾಡಿದ್ದೆ ನಿಜ. ನನ್ನನ್ನ ಕ್ಷಮಿಸಿ ಸಹಕಾರ ನೀಡಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು. ನಿಮ್ಮ ಮನೆಯಲ್ಲಿ ಅಣ್ಣ, ತಮ್ಮ ಯಾರಾದ್ರು ತಪ್ಪು ಮಾಡಿದರೆ ತಪ್ಪು ತಿದ್ದಿಕೊಳ್ಳಲು ಅವಕಾಶ ಮಾಡಿಕೊಡುವಂತೆ ನನಗೂ ಅವಕಾಶ ಮಾಡಿಕೊಡಿ. ನಾನು ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದರು ಅಧ್ಯಕ್ಷನಾಗಲು ಒಂದು ವರ್ಷ ಬೇಕಾಯಿತು. ನನ್ನ ಜೀವನದಲ್ಲಿ ಮಾಡಿದ ಆ ತಪ್ಪು ಎಷ್ಟು ದೊಡ್ಡ ತಪ್ಪು ಅಂತ ನನಗೆ ಗೊತ್ತಾಗಿದೆ ಎಂದು ತಿಳಿಸಿದರು.
ಮಂದಿನ ದಿನಗಳಲ್ಲಿ ಸಾಕಷ್ಟು ಯೋಜನೆಗಳನ್ನು ಯೂತ್ ಕಾಂಗ್ರೆಸ್ ಹಮ್ಮಿಕೊಳ್ಳುತ್ತದೆ. ನೀವೆಲ್ಲಾ ನನ್ನ ಕೈ ಹಿಡಿದು ಮುನ್ನೆಡಸಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬರುವತನಕ ನಿದ್ದೆ ಇಲ್ಲ. ನಾವು ಅಧಿಕಾರಕ್ಕೆ ಬರುವವರೆಗೂ ಯೂತ್ ಕಾಂಗ್ರೆಸ್‍ಗೆ ರೆಸ್ಟ್ ಇಲ್ಲ. ಮೊದಲಿಗೆ ಅಪ್ಪ ಅಮ್ಮನಿಗೆ ಧನ್ಯವಾದಗಳು ತಿಳಿಸುತ್ತೇನೆ. ತಪ್ಪು ಮಾಡಿದಾಗ ಮತ್ತೊಂದು ಸಲ ತಪ್ಪು ಮಾಡಬೇಡ ಎಂದು ನನಗೆ ಬುದ್ಧಿ ಹೇಳಿದ್ದಾರೆ. ನಾನು ಏನೇ ತಪ್ಪು ಮಾಡಿದ್ರು ಮಗನಾಗಿ ಸಿದ್ದರಾಮಯ್ಯ ತಿಳಿ ಹೇಳಿದ್ದಾರೆ. ನಲಪಾಡ್ ಕಥೆ ಮುಗಿತು ಅಂದುಕೊಂಡಿದ್ದಾಗ ನನ್ನ ಕೈ ಹಿಡಿದು ಇಲ್ಲಿಯತನಕ ತರಿಸಿದ್ದು ನನ್ನ ನಾಯಕ ಡಿ.ಕೆ ಶಿವಕುಮಾರ್, ಬಿ.ವಿ.ಶ್ರೀನಿವಾಸ್ ಅವರೆಲ್ಲರಿಗೂ ಧನ್ಯವಾದಗಳು ಎಂದರು. ಇದನ್ನೂ ಓದಿ: ನೆಚ್ಚಿನ ಶಿಷ್ಯ ನಲಪಾಡ್‌ಗೆ ಡಿಕೆಶಿಯಿಂದ ಸ್ಪೆಷಲ್ ಗಿಫ್ಟ್
ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.