ಬೆಂಗಳೂರು: ತುರ್ತು ಪರಿಸ್ಥಿತಿ (Emergency In India) ಜಾರಿಯಾದಾಗ ನಾನೂ ವಿರೋಧಿಸಿದ್ದೆ. ತುರ್ತು ಪರಿಸ್ಥಿತಿಯನ್ನ ವಿರೋಧಿಸಿ ಮೈಸೂರಿನ ಸೈಯಾಜಿರಾವ್ ರಸ್ತೆಯಲ್ಲಿ ಟೇಬಲ್ ಹಾಕಿಕೊಂಡು ಭಾಷಣ ಮಾಡಿದ್ದೆ. ತುರ್ತು ಪರಿಸ್ಥಿತಿ ವಿರೋಧಿಸಿ ಹ್ಯಾಂಡ್ ಬಿಲ್ ಹಂಚಿದ್ದೆ. ಆಗ ಪೊಲೀಸರು ಒದ್ದು ಒಳಗೆ ಹಾಕಿದ್ದರು. ತುರ್ತು ಪರಿಸ್ಥಿತಿಯನ್ನ ತೀವ್ರವಾಗಿ ವಿರೋಧಿಸಿದ್ದರಿಂದ ದೇವರಾಜ ಠಾಣೆ ಪೊಲೀಸರು (Devaraja PoliceStation) ಒಂದು ದಿನ ಜೈಲಿಗೆ ಹಾಕಿದ್ದರು… ಶಾಸಕರ ತರಬೇತಿ ಶಿಬಿರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಹಂಚಿಕೊಂಡ ಇಂಟರೆಸ್ಟಿಂಗ್ ಸಂಗತಿಗಳಿವು.
ನೆಲಮಂಗಲದ ಕ್ಷೇಮವನದಲ್ಲಿ ಜೂನ್ 26ರಿಂದ ಮೂರು ದಿನಗಳ ಕಾಲ ನೂತನ ಶಾಸಕರಿಗೆ ತರಬೇತಿ ಶಿಬಿರ ಆಯೋಜಿಸಲಾಗಿದೆ. ಇದರೊಂದಿಗೆ ನೂತನ ಶಾಸಕರೊಂದಿಗೆ ಸಂವಾದ ಕಾರ್ಯಕ್ರಮವೂ ನಡೆಯಲಿದೆ. ಮೊದಲ ದಿನದ ಶಿಬಿರದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಹಲವು ಇಂಟರೆಸ್ಟಿಂಗ್ ಸಂಗತಿಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.
ಸಿಎಂ ಮೊಬೈಲ್ ಯಾಕೆ ಬಳಸಲ್ಲ?:
ಹುಮ್ನಾಬಾದ್ ಶಾಸಕ ಸಿದ್ದು ಪಾಟೀಲ್, ನೀವು ಮೊಬೈಲ್ (Mobile) ಬಳಕೆ ಮಾಡಲ್ಲ ಯಾಕೆ? ಎಂದು ಕೇಳಿದಾಗ, ಸಿಎಂ ಮೊಬೈಲ್ ಬಂದಾಗ 6 ತಿಂಗಳು ಇಟ್ಟುಕೊಂಡಿದ್ದೆ. ಆಗ ಕೆಲವರು ಮಧ್ಯರಾತ್ರಿ ವೇಳೆಯೆಲ್ಲಾ ಕರೆ ಮಾಡ್ತಿದ್ರು, ಕೆಲವರು ಕುಡಿದು ಕರೆ ಮಾಡ್ತಿದ್ರು.. ಹೀಗಾಗಿ ಮೊಬೈಲ್ ಎಸೆದುಬಿಟ್ಟೆ. ಈಗ ನಮ್ ಪಿಎಗಳ ನಂಬರ್ ಕೊಡ್ತೀನಿ ಅವರ ಮೊಬೈಲ್ ನಿಂದ ಕಾಲ್ ಮಾಡ್ತೀನಿ ಎಂದು ಹೇಳಿದರು.
ನನ್ನ ಚುನಾವಣೆಗೆ 63 ಸಾವಿರ ಖರ್ಚಾಗಿತ್ತು:
ನಂತರ `ನೀವು ರಾಜಕೀಯಕ್ಕೆ ಬಂದಾಗ ಇರೋ ಸ್ಥಿತಿಗೂ – ಈಗ ಇರುವ ಸ್ಥಿತಿಗೂ ಏನು ವ್ಯತ್ಯಾಸ ಎಂಬ ನೆಲಮಂಗಲದ ಶಾಸಕನ ಪ್ರಶ್ನೆಗೆ ಉತ್ತರಿಸಿ, ನಾನು ರಾಜಕೀಯ ಪ್ರಾರಂಭ ಮಾಡಿದಾಗ ಜನರೇ ದುಡ್ಡು ಹಾಕಿ ಚುನಾವಣೆ ಮಾಡಿದ್ದರು. ನಾನು ನನ್ನ ಚುನಾವಣೆಗೆ ಕೇವಲ 63 ಸಾವಿರ ರೂ. ಮಾತ್ರ ಖರ್ಚು ಮಾಡಿದ್ದೆ. ಜನರೇ ಹಣ ಹಾಕಿ ಕೆಲಸ ಮಾಡಿದ್ರು. ಈಗ ಆ ಪರಿಸ್ಥಿತಿ ಇಲ್ಲ. ಅಲ್ಲದೇ ಮೊದಲು ಅಷ್ಟೊಂದು ಜಾತಿ ವ್ಯವಸ್ಥೆಗಳಿರಲಿಲ್ಲ. ಈಗ ವಿದ್ಯಾವಂತರಾದರೂ ಜಾತಿ ವ್ಯವಸ್ಥೆ ಇದೆ. ಆಗ ಪಕ್ಷಾಂತರ ಪಿಡುಗೂ ಕಡಿಮೆ ಇತ್ತು. ಈಗ ಲಂಗು-ಲಗಾಮು ಇಲ್ಲದೆ ಆಗ್ತಿದೆ. ಆಪರೇಷನ್ ಕಮಲ, ಹಸ್ತ, JDS ಯಾವುದು ಇರಲಿಲ್ಲ. ಈಗ ಆಪರೇಷನ್ ಕಮಲ ಎಲ್ಲವೂ ಆಗ್ತಿದೆ. ಅಂತಹದ್ದೆಲ್ಲ ಆಗಬಾರದು. ಇಷ್ಟವಿಲ್ಲ ಅಂದ್ರೆ ಪಕ್ಷಬಿಟ್ಟು ಹೋಗಬೇಕೇ ಹೊರತು ಪಕ್ಷಾಂತರ ಆಗಬಾರದು. 10ನೇ ಪರಿಚ್ಛೇದ ಸರಿಯಾಗಿ ಜಾರಿ ಆಗಬೇಕು ಎಂದು ಒತ್ತಾಯಿಸಿದರು.
ವಿರೋಧ ಪಕ್ಷಗಳು ಸರ್ಕಾರದ ಕಿವಿ ಹಿಂಡಬೇಕು:
ಶಾಸಕ ಗೋಪಾಲ್ ಪೂಜಾರಿ ಅವರ `ಬಿಜೆಪಿ ವಿರುದ್ಧ ನಾವು ರಾಜಕೀಯ ಮಾಡಿಕೊಂಡು ಬಂದಿರೋರು, ಮುಂದೆ ಹೇಗೆ ಇರಬೇಕು?’ ಎಂಬ ಪ್ರಶ್ನೆಗೆ ಸಂಯಮದಿಂದಲೇ ಉತ್ತರಿಸಿದ ಸಿಎಂ, ವಿರೋಧ ಪಕ್ಷದರು ಸರ್ಕಾರದ ಕಣ್ಗಾವಲು ರೀತಿ ಇರಬೇಕು. ಸರ್ಕಾರದವರು ತಪ್ಪು ಮಾಡಿದ್ರೆ ಅಂತಹವುಗಳನ್ನ ಪ್ರಶ್ನೆ ಮಾಡಬೇಕು. ಜನಪರ ಕೆಲಸಕ್ಕೆ ಸರ್ಕಾರದ ಕಿವಿ ಹಿಂಡೋ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಇದೇ ವೇಳೆ ಚನ್ನಗಿರಿ ಶಾಸಕನ `ವಿಪಕ್ಷ ಸ್ಥಾನ ಖುಷಿ ಕೊಟ್ಟಿದೆಯಾ? ಸಿಎಂ ಸ್ಥಾನ ಖುಷಿ ಕೊಟ್ಟಿದೆಯಾ?’ ಎಂಬ ಪ್ರಶ್ನೆಗೆ, ಎರಡು ಖುಷಿ ಕೊಡುತ್ತೆ, ಜನರ ಪರ ಇದ್ದಾಗ ಮಾತ್ರ ಎಂದು ನುಡಿದರು.