ಮಂಡ್ಯ: ರಾಜ್ಯ ಸರ್ಕಾರದ ಸಚಿವರ ವಿರುದ್ಧ ಷಡ್ಯಂತ್ರ ರೂಪಿಸಿ ಸ್ಟಿಂಗ್ ಆಪರೇಷನ್ ನಡೆಸಲು ದೆಹಲಿ ಮೂಲದ ಏಜೆನ್ಸಿಯೊಂದಕ್ಕೆ ಸುಪಾರಿ ನೀಡಲಾಗಿದೆ ಎಂದು ಮಂಡ್ಯ ಶಾಸಕ ಗಣಿಗ ರವಿಕುಮಾರ್ (Ganiga Ravi) ಗಂಭೀರ ಆರೋಪ ಮಾಡಿದ್ದಾರೆ.
ಮಂಡ್ಯದಲ್ಲಿ (Mandya) ಸುದ್ದಿಗೋಷ್ಠಿ ನಡೆಸಿದ ಅವರು, ಮಾಧ್ಯಮಗಳ ಮುಂದೆ ಪೆನ್‌ಡ್ರೈವ್ ಪ್ರದರ್ಶಿಸಿ, ಇಡೀ ಕುತಂತ್ರದ ಸಿಸಿಟಿವಿ ವಿಡಿಯೋ, ಆಡಿಯೋ ಸಾಕ್ಷ್ಯಗಳು ತಮ್ಮ ಬಳಿ ಇವೆ ಎಂದು ಬಾಂಬ್ ಸಿಡಿಸಿದ್ದಾರೆ. ಸರ್ಕಾರಕ್ಕೆ ಮುಜುಗರ ತರಲು ಕೇಂದ್ರ ಸಚಿವರೊಬ್ಬರು ಹಾಗೂ ರಾಜ್ಯದ ಪ್ರಮುಖ ಬಿಜೆಪಿ (BJP) ನಾಯಕರೊಬ್ಬರು ಸೇರಿ ದೆಹಲಿ ಮೂಲದ ಏಜೆನ್ಸಿಗೆ ಸುಪಾರಿ ಕೊಟ್ಟಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿ, ಹಣವನ್ನೂ ನೀಡಿದ್ದಾರೆ. ನಮ್ಮ ಸಚಿವರಿಗೆ ನಾನಾ ಆಮಿಷಗಳನ್ನು ಒಡ್ಡಲಾಯಿತಾದರೂ ಯಾರೂ ಇವರ ಬಲೆಗೆ ಬಿದ್ದಿಲ್ಲ, ನಮ್ಮ ಸಚಿವರು ಸಂಪೂರ್ಣ ಕ್ಲೀನ್ ಆಗಿದ್ದಾರೆ ಎಂದರು. ಇದನ್ನೂ ಓದಿ: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಲು ಯತ್ನಿಸಿದ್ದರು: ಡಿಕೆಶಿ ಬಾಂಬ್
ನಮ್ಮ ಬಳಿ ಯಾವ ಏಜೆನ್ಸಿ ಭಾಗಿಯಾಗಿದೆ, ಯಾರೆಲ್ಲಾ ನಾಯಕರ ಪಿಎಗಳು ಸಂಪರ್ಕದಲ್ಲಿದ್ದರು, ಎಷ್ಟು ಹಣ ಕೈಬದಲಾಗಿದೆ ಎಂಬ ಸಂಪೂರ್ಣ ದಾಖಲೆಗಳಿವೆ. ಇದು ಕೇವಲ ಹಿಟ್ ಆ್ಯಂಡ್ ರನ್ ಹೇಳಿಕೆಯಲ್ಲ. ಈ ಎಲ್ಲಾ ಸಿಸಿಟಿವಿ, ಆಡಿಯೋ – ವಿಡಿಯೋ ಸಾಕ್ಷ್ಯಗಳನ್ನಿಟ್ಟುಕೊಂಡು ಇನ್ನೊಂದು ವಾರದೊಳಗೆ ಅಧಿಕೃತವಾಗಿ ತನಿಖಾಧಿಕಾರಿಗಳಿಗೆ ದೂರು ನೀಡಲಿದ್ದೇವೆ ಹಾಗೂ ಮಾಧ್ಯಮಗಳ ಮುಂದೆಯೂ ಬಿಡುಗಡೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇದು ಎಐ ಯುಗ, ಯಾವುದನ್ನು ಬೇಕಾದರೂ ಸುಲಭವಾಗಿ ಸೃಷ್ಟಿ ಮಾಡಬಹುದು. ಇಂತಹ ಷಡ್ಯಂತ್ರಗಳ ಬಗ್ಗೆ ಖಚಿತ ಮಾಹಿತಿ ಮತ್ತು ದಾಖಲೆಗಳು ಇದ್ದ ಕಾರಣಕ್ಕಾಗಿಯೇ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇತ್ತೀಚಿನ ಸಚಿವ ಸಂಪುಟ ಸಭೆಯಲ್ಲಿ ಎಲ್ಲ ಸಚಿವರಿಗೂ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದರು. ಈ ಹಿಂದೆ ಸಿಡಿ ಸೃಷ್ಟಿಸಲು ಬಂಡವಾಳ ಹೂಡಿದ್ದೇ ಬಿಜೆಪಿ. ಮುಡಾ ಹಗರಣದಲ್ಲಿ ಸ್ನೇಹಮಯಿ ಕೃಷ್ಣ ಅವರಿಗೆ ದಾಖಲೆ ಕೊಟ್ಟವರು ಯಾರು ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಬಿಜೆಪಿ-ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಸರ್ಕಾರದ ಜನಪ್ರಿಯತೆ ಹಾಗೂ ಅಭಿವೃದ್ಧಿಯ ವೇಗವನ್ನು ಸಹಿಸಲಾಗದೆ ವಿಪಕ್ಷಗಳು ಹತಾಶೆಯಿಂದ ಇಂತಹ ಷಡ್ಯಂತ್ರಗಳಿಗೆ ಕೈಹಾಕುತ್ತಿವೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಸ್ಟಿಂಗ್ ಆಪರೇಷನ್, ಪೆನ್‌ಡ್ರೈವ್ ಪಿತಾಮಹ ಕುಮಾರಸ್ವಾಮಿ: ಬಾಲಕೃಷ್ಣ

