ಕಂದಕಕ್ಕೆ ಉರುಳಿದ ಬಸ್ – ಮರಗಳಿಂದಾಗಿ 70 ಮಂದಿ ಪಾರು

Public TV
1 Min Read
BUS

– ಮಿಸ್ಸಾಗಿದ್ರೆ 200 ಅಡಿ ಆಳಕ್ಕೆ ಬೀಳುತಿತ್ತು ಬಸ್

ಗಾಂಧಿನಗರ: ಕಂದಕಕ್ಕೆ ಉರುಳಿ ಬೀಳುತ್ತಿದ್ದ ಬಸ್ಸಿನಲ್ಲಿದ್ದ 70 ಮಂದಿ ಪ್ರಯಾಣಿಕರು ಮರಗಳಿಂದಾಗಿ ಪವಾಡಸದೃಶವಾಗಿ ಪಾರಾದ ಘಟನೆ ಗುಜರಾತಿನ ಸೂರತ್‍ನಲ್ಲಿ ನಡೆದಿದೆ.

ಈ ಘಟನೆ ಶುಕ್ರವಾರ ಸಂಜೆ ನಡೆದಿದ್ದು, ಸೂರತ್‍ನ ಡೈಮಂಡ್ ಸಿಟಿ ವ್ಯಾಪ್ತಿಯಲ್ಲಿ ಖಾಸಗಿ ಬಸ್ ಶಿರಡಿಗೆ ಹೋಗುತ್ತಿತ್ತು. ಈ ದಾರಿ ಗುಡ್ಡಗಾಡು ಪ್ರದೇಶವಾಗಿದ್ದರಿಂದ ರಸ್ತೆ ತುಂಬ ಕಿರಿದಾಗಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್ ಕಂದಕಕ್ಕೆ ಜಾರಿದೆ. ಆದರೆ ಆ ಸ್ಥಳದಲ್ಲಿ ಸಾಕಷ್ಟು ಮರಗಳಿದ್ದರಿಂದ 200 ಅಡಿ ಆಳದ ಕಂದಕಕ್ಕೆ ಉರುಳದೇ ಬಸ್ ಅಲ್ಲೇ ಸಿಕ್ಕಿಹಾಕಿಕೊಂಡಿದೆ. ಅದೃಷ್ಟವಶಾತ್ ಎಲ್ಲ ಪ್ರಯಾಣಿಕರು ಬಾಗಿಲ ಮೂಲಕವೇ ಹೊರ ಬಂದಿದ್ದಾರೆ.

ಸಹರಾ ದರ್ವಜಾ ಪ್ರದೇಶದಿಂದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶಿರಡಿಗೆ ಹೋಗುತ್ತಿದ್ದೆವು. ಬಸ್ ಡ್ಯಾಂಗ್ ಜಿಲ್ಲೆಯಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ಹೋಗುತಿತ್ತು. ಆಗ ಮಲೆಗಾವ್-ಸಪುತಾರಾಯಲ್ಲಿ ಕಡಿದಾದ ದಾರಿಯಲ್ಲಿ ಚಾಲಕ ತಿರುವು ತೆಗೆದುಕೊಳ್ಳುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಪ್ರಯಾಣಿಕರು ಪೊಲೀಸರಿಗೆ ವಿವರಿಸಿದ್ದಾರೆ.

ಸದ್ಯಕ್ಕೆ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ. ಈ ಕುರಿತು ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಇತ್ತ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಸಹರಾ ದರ್ವಜಾದ ನಿವಾಸಿಗಳಾದ ರಾಥೋಡ್ ಕುಟುಂಬದ ಸದಸ್ಯರು ಶಿರಡಿಗೆ ತೆರಳಲು ಖಾಸಗಿ ಬಸ್ ಬುಕ್ ಮಾಡಿಕೊಂಡು ಹೊರಟಿದ್ದರು ಎಂದು ತಿಳಿದು ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *