ಚಿಕ್ಕೋಡಿ: ಕಾಮುಕನೊಬ್ಬ ಅಪ್ತಾಪ್ತ ಬಾಲಕಿಯನ್ನು ಮನೆಯಿಂದಲೇ ಅಪಹರಿಸಿ ಸತತ ಮೂರು ತಿಂಗಳು ಅತ್ಯಾಚಾರ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಈಗ ಆರೋಪಿ ಸುನೀಲ್ ಬಿಳ್ಳೂರ್ (23) ನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ:
ಸುನೀಲ್ ಮೇ 4 ರಂದು ಬಾಲಕಿಯನ್ನು ಅವರ ಮನೆಯಿಂದಲೇ ಅಪಹರಿಸಿದ್ದಾನೆ. ಬಳಿಕ ವಿಜಯಪುರದ ಅಜ್ಞಾತ ಸ್ಥಳದಲ್ಲಿರಿಸಿ ಬಾಲಕಿ ಮೇಲೆ ಮೂರು ತಿಂಗಳು ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಇತ್ತ ಮನೆಯಿಂದ ಕಾಣೆಯಾಗಿದ್ದ ಮಗಳ ಬಗ್ಗೆ ಪೋಷಕರು ಪೊಲೀಸರಿಗೆ ನಾಪತ್ತೆ ದೂರನ್ನು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡು ಆರೋಪಿಯನ್ನು ಪತ್ತೆ ಮಾಡಿದ್ದಾರೆ. ಆರೋಪಿ ಇರುವ ಬಗ್ಗೆ ಸುಳಿವೂ ಸಿಕ್ಕಿರಲಿಲ್ಲ. ಆದರೆ ಶುಕ್ರವಾರ ಆರೋಪಿ ಸ್ನೇಹಿತನ ಬಳಿ ಹಣ ಕೇಳಲು ಕೊಕಟನೂರಿಗೆ ಬಂದಾಗ ಐಗಳಿ ಪೊಲೀಸರು ಬಂಧಿಸಿದ್ದಾರೆ.
ಸದ್ಯಕ್ಕೆ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆಂದು ಜಿಲ್ಲಾಸ್ಪತ್ರೆಗೆ ಪೊಲೀಸರು ರವಾನಿಸಿದ್ದಾರೆ. ಆರೋಪಿ ಸುನೀಲ್ ಬಿಳ್ಳೂರ್ ವಿರುದ್ಧ 376 ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಈ ಘಟನೆ ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.