ಚಾಮರಾಜನಗರ: ವಿಧಾನದಸೌಧದ ತಮ್ಮ ಕಚೇರಿಯಲ್ಲಿ ಸಿಬ್ಬಂದಿ ಬಳಿ ಹಣ ಸಿಕ್ಕಿರುವ ಹಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ, ಈ ಪ್ರಕರಣದ ಬಗ್ಗೆ ಯಾವುದೇ ತನಿಖೆಗೂ ಸಿದ್ಧ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿದ್ದಾರೆ.
ಉಪ್ಪಿನಮೋಳೆಯ ನಿವಾಸದಲ್ಲಿ ಮಾತನಾಡಿದ ಅವರು, ಶುಕ್ರವಾರ ಸಂಜೆ ತನ್ನ ಕೊಠಡಿಯಿಂದ ಬಂದ ವ್ಯಕ್ತಿ ಬಳಿ ಹಣ ಪತ್ತೆಯಾದ ವಿಚಾರ ಗೊತ್ತಾಯಿತು. ಹಣದ ಸಮೇತ ಸಿಕ್ಕಿ ಬಿದ್ದರುವ ಮೋಹನ ಎಂಬಾತ ನನ್ನ ಪಿಎ ಅಲ್ಲ. ಆತ ಟೈಪಿಸ್ಟ್, ಆತನ ಮುಖವನ್ನು ನಾನು ನೋಡಿಲ್ಲ. ನನಗೆ ಈ ಹಿಂದೆ ಮಂಜುನಾಥ ಹಾಗೂ ಕೃಷ್ಣಪ್ಪ ಎಂಬ ಪಿಎಗಳಿದ್ದರು. ಮಂಜುನಾಥ್ ಎಂಬಾತ ನನ್ನ ಸಹಿಯನ್ನೇ ಫೋರ್ಜರಿ ಮಾಡಿದ್ದ. ಕೃಷ್ಣಪ್ಪನ ಮೇಲೂ ನನಗೆ ಅನುಮಾನವಿತ್ತು ಇವರಿಬ್ಬರನ್ನು ಬೆಳಗಾವಿ ಅಧಿವೇಶನದ ಬಳಿಕ ಕೆಲಸದಿಂದ ತೆಗೆದುಹಾಕಿದ್ದೆ. ಹಾಗಾಗಿ ಇವರಿಬ್ಬರ ಮೇಲೆ ನನಗೆ ಅನುಮಾನವಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಿಧಾನಸೌಧದ ಪಶ್ಚಿಮ ಗೇಟ್‍ನಲ್ಲಿ ಸಿಕ್ತು ಕಂತೆ ಕಂತೆ ಹಣ – ಸಚಿವರ ಕಚೇರಿ ಟೈಪಿಸ್ಟ್ ಬಳಿಯೇ ಹಣ ಪತ್ತೆ!
ಶುಕ್ರವಾರ ನನ್ನ ಕಚೇರಿಗೆ ಕೃಷ್ಣಪ್ಪ ಬಂದಿದ್ದ ಎಂಬ ಮಾಹಿತಿ ಇದೆ. ಅವನೇಕೆ ಬಂದಿದ್ದ ಎಂಬ ಅನುಮಾನ ಕಾಡುತ್ತಿದೆ. ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ಈ ಬಗ್ಗೆ ಯಾವುದೇ ತನಿಖೆ ಎದುರಿಸಲು ಸಿದ್ಧನಾಗಿದ್ದೇನೆ. ನನ್ನನ್ನು ಸಿಲುಕಿಸಲು ಪಿತೂರಿ ನಡೆದಿದೆ. ವಿಧಾನಸೌಧದಲ್ಲಿ ಅತ್ಯಂತ ಬಿಗಿ ಪೊಲೀಸ್ ಭದ್ರತೆಯಿದೆ. ಸಿಸಿಟಿವಿ ಇದೆ. ಹೀಗಿದ್ದರೂ ವಿಧಾನಸೌಧದ ಒಳಗಡೆ ಹಣ ಹೋಗಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ.
ಕಳೆದ ದಿನ ವಿಧಾನ ಸೌಧದ ಪಶ್ಚಿಮ ಗೇಟ್ ಬಳಿ ಕಾರು ಪರಿಶೀಲನೆ ನಡೆಸುತ್ತಿದ್ದ ವೇಳೆ ಮೋಹನ್ ಎಂಬಾತನ ಬಳಿ ಸುಮಾರು 25.76 ಲಕ್ಷ ರೂ. ಹಣ ಪತ್ತೆಯಾಗಿತ್ತು. ಮೋಹನ್ ಸಚಿವ ಪುಟ್ಟರಂಗಶೆಟ್ಟಿ ಅವರ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಟೈಪಿಸ್ಟ್ ಎನ್ನುವ ಪ್ರಾಥಮಿಕ ಮಾಹಿತಿ ಲಭಿಸಿತ್ತು. ಬಳಿಕ ಹಣ ಪತ್ತೆಯಾದ ಕೂಡಲೇ ಮೋಹನ್ ನನ್ನು ವಶಕ್ಕೆ ಪಡೆದು ವಿಧಾನಸೌಧ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿದ್ದು, ಹಣದ ಮೂಲದ ಕುರಿತು ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv