ವಿಜಯಪುರ: ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ನಿಮ್ಮ ಮಗ ನಿಖಿಲ್ ಕುಮಾರಸ್ವಾಮಿ ಗೆಲ್ಲಲೇ ಇಲ್ಲ. ಅವರನ್ನೇ ಗೆಲ್ಲಿಸೋಕೆ ಆಗದೇ ಈಗ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುತ್ತೇನೆ ಎಂದು ಹೇಳುವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ನೊಬೆಲ್ ಪ್ರಶಸ್ತಿ ಕೊಡಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.
ಅಥಣಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅನರ್ಹ ಶಾಸಕರನ್ನು ಸೋಲಿಸುವುದೇ ನಮ್ಮ ಗುರಿ ಎಂದು ಓರ್ವ ಮಹಾ ಪುರುಷ ಹೇಳುತ್ತಾರೆ. ಆದರೆ ಅವರ ಅಪ್ಪ ಮತ್ತು ಮಗನನ್ನೇ ಗೆಲ್ಲಿಸಲು ಅವರಿಂದ ಸಾಧ್ಯವಾಗಲಿಲ್ಲ. ಹೀಗಿರುವಾಗ ಅನರ್ಹರನ್ನು ಸೋಲಿಸುತ್ತೇನೆ ಎಂದು ಹೇಳುವ ನಿಮಗೆ ನೊಬೆಲ್ ಪ್ರಶಸ್ತಿ ಕೊಡಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.
Advertisement
Advertisement
ಇನ್ನೊಬ್ಬ ಮಹಾಪುರುಷ ಈ ಚುನಾವಣೆ ಬಳಿಕ ಸರ್ಕಾರ ಬೀಳುತ್ತೆ ಎಂದು ಹೇಳಿದ್ದಾರೆ. ಯಾಕೋ ಅವರ ಹೆಸರು ಹೇಳೋಕೆ ಬಾಯಲ್ಲಿ ಬರೊಲ್ಲ. ಆಗ ಸಿಎಂ ಆದಾಗ ಸೊಕ್ಕಿನಿಂದ ಮಾತನಾಡಿ ಮುಂದೆ ನಾನೇ ಸಿಎಂ ಎಂದು ಹೇಳಿದ್ದರು. ಕಾಂಗ್ರೆಸ್ ಸರ್ಕಾರ ಕೆಡವಿ 78 ಸ್ಥಾನಕ್ಕೆ ತಂದ ಮುಖ್ಯಮಂತ್ರಿ ಆತ. ಕುಮಾರಸ್ವಾಮಿ ಅವರಪ್ಪನ ಆಣೆಗೂ ಮುಖ್ಯಮಂತ್ರಿ ಆಗುವುದಿಲ್ಲ ಎಂದಿದ್ದರು. ಆದರೆ ನಂತರ ಇವರೇ ಅವರ ಪಾದದಡಿ ಕುಳಿತು ಸಿಎಂ ಮಾಡಿದರು. ಯಡಿಯೂರಪ್ಪ ಮತ್ತೊಮ್ಮೆ ಸಿಎಂ ಆಗುವುದಿಲ್ಲ ಎಂದಿದ್ದರು. ಇದೀಗ ಮತ್ತೆ ಸಿಎಂ ಆಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎರಡು ಸೀಟೂ ಗೆಲ್ಲುವುದಿಲ್ಲ ಎಂದು ದೇವೇಗೌಡರು, ಸಿದ್ದರಾಮಯ್ಯ ಹೇಳಿದ್ದರು. ಆದರೆ ಪಾಪ ಅವರಿಗೆ ಒಂದೊಂದೇ ನಾಮ ಬಿತ್ತು. ಸಿದ್ದರಾಮಯ್ಯ ಯಾವುದು ಆಗುತ್ತದೆ ಎನ್ನುತ್ತಾರೋ ಅದು ಆಗುವುದಿಲ್ಲ. ಯಾವುದು ಆಗುವುದಿಲ್ಲ ಎನ್ನುತ್ತಾರೋ ಅದು ಆಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
Advertisement
ಯಡಿಯೂರಪ್ಪ-ಸವದಿ, ರಾಮ-ಲಕ್ಷ್ಮಣರು:
ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಯವರನ್ನು ಈಶ್ವರಪ್ಪನವರು ರಾಮಾಯಣದ ರಾಮ-ಲಕ್ಷ್ಮಣರಿಗೆ ಹೋಲಿಸಿದ್ದಾರೆ. ಅವರಿಬ್ಬರೂ ಯುದ್ಧಕ್ಕೆ ಹೊರಟಿದ್ದಾರೆ, ಅವರೊಂದಿಗೆ ನಾವೆಲ್ಲ ಸೈನಿಕರು. ನಾವು ಎಲ್ಲರೂ ಪ್ರಚಾರಕ್ಕೆ ಮನೆ ಬಿಟ್ಟು ಹೊರಟಿದ್ದೇವೆ. ರಾಮ-ಲಕ್ಣ್ಮಣ ಯುದ್ಧಕ್ಕೆ ಹೊರಟ್ರೆ ನಾವೆಲ್ಲ ಸೈನಿಕರ ರೀತಿಯಲ್ಲಿ ನುಗ್ಗಿ ಗೆಲ್ಲುತ್ತೇವೆ ಎಂದರು.
Advertisement
ಬಿಜೆಪಿ ಅಭ್ಯರ್ಥಿ ಕುಮಟಳ್ಳಿ ಮುಂದಿನ ಸಚಿವರು. ಸವದಿ ಡಿಸಿಎಂ ಅಗಿ ಮುಂದುವರಿಯುತ್ತಾರೆ. ನೀವು ಮತ ಹಾಕುತ್ತಿರುವುದು ಸಚಿವರಿಗೆ. ಇವರನ್ನು 25 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಬೇಕು. ನಿಮ್ಮ ಮತಕ್ಷೇತ್ರಕ್ಕೆ ಇಬ್ಬರು ಸಚಿವರು. ಈ ಅದೃಷ್ಟ ನಮ್ಮ ಜಿಲ್ಲೆಗೆ ಇಲ್ಲವಲ್ಲ ಎಂದು ನನಗೆ ಹೊಟ್ಟೆ ಉರಿಯುತ್ತದೆ ಎಂದು ಹಾಸ್ಯ ಚಟಾಕಿ ಸಿಡಿಸಿದರು.