ಹಾಸನ: ‘ಮೈತ್ರಿ ಸರ್ಕಾರದಿಂದ ಜನ ಬೇಸತ್ತಿದ್ದಾರೆ. ಜನರೇ ಬುದ್ಧಿ ಕಲಿಸುತ್ತಾರೆ’ ಎಂದು ಸಚಿವ ರೇವಣ್ಣ ಅವರು ಸುದ್ದಿಗೊಷ್ಠಿ ವೇಳೆ ಬಾಯ್ತಪ್ಪಿ ಹೇಳಿ ಎಡವಟ್ಟು ಮಾಡಿಕೊಂಡಿದ್ದಾರೆ.
ಪಕ್ಷದ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋಮು ಪಕ್ಷವನ್ನು ಅಧಿಕಾರದಿಂದ ದೂರ ಇಡುವ ಉದ್ದೇಶದಿಂದ ಮೈತ್ರಿ ಮಾಡಿಕೊಂಡಿದೆ. ರಾಜ್ಯ, ರಾಷ್ಟ್ರದಲ್ಲಿ ಬಿಜೆಪಿ ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದರು. ಈ ವೇಳೆ ಜನರ ಅಭಿಪ್ರಾಯ ಏನು ಎಂಬ ಮಾಧ್ಯಮ ಪ್ರಶ್ನೆಗೆ ಉತ್ತರಿಸಿದ ಅವರು, ಮೈತ್ರಿಯಿಂದ ಜನ ಬೇಸತ್ತಿದ್ದಾರೆ. ಜನ ಬುದ್ಧಿ ಕಲಿಸುತ್ತಾರೆ ಎಂದರು. ತಕ್ಷಣ ಎಚ್ಚೆತ್ತ ಅವರು, ಮೈತ್ರಿ ಸರ್ಕಾರದಿಂದ ಜನ ಖುಷಿಯಾಗಿದ್ದಾರೆ ಎಂದು ತಿದ್ದಿಕೊಂಡರು.
Advertisement
Advertisement
ಕಳೆದ 9 ತಿಂಗಳಿನಿಂದ ರಾಜ್ಯ ಸರ್ಕಾರ ಉರುಳುತ್ತೆ ಎಂದು ಹೇಳುತ್ತಿದ್ದಾರೆ. ಏನಾದ್ರು ಆಯಿತಾ? ಮುಂದು ಕೂಡ ಸರ್ಕಾರ ಉತ್ತಮವಾಗಿರುತ್ತದೆ. ಶಿಕ್ಷಣ, ಅಭಿವೃದ್ಧಿ, ಆರೋಗ್ಯ, ಉದ್ಯೋಗ ಕ್ಷೇತ್ರಗಳತ್ತ ಸಮ್ಮಿಶ್ರ ಸರ್ಕಾರ ಹೆಚ್ಚಿನ ಗಮನ ಹರಿಸುತ್ತದೆ ಎಂದು ತಿಳಿಸಿದರು. ಇದೇ ವೇಳೆ ಎ. ಮಂಜು ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಿ, ಅವರ ಯಾವುದೇ ಆರೋಪಗಳಿಗೆ ನಾನು ಉತ್ತರ ಕೊಡಲ್ಲ. ಎಲ್ಲ ಜಿಲ್ಲೆಯ ಜನರು ತೀರ್ಮಾನ ಮಾಡಲಿದ್ದಾರೆ. ಚುನಾವಣೆ ಎದುರಿಸಲು ಶಕ್ತಿ ಇಲ್ಲದೇ ನನ್ನ ಕುಟುಂಬದ ವಿರುದ್ಧ ಭೂ ಕಬಳಿಕೆ ಆರೋಪ ಮಾಡಿದ್ದರು. ಆದರೆ ನ್ಯಾಯಾಲಯ ಪ್ರಕರಣವನ್ನು ಡಿಸ್ಮಿಸ್ ಮಾಡಿದೆ. ಸಿದ್ದರಾಮಯ್ಯ ಅವರಿಗೆ ಟೋಪಿ ಹಾಕಿ, ಈಗ ಮೋದಿ ಹಿಂದೆ ಹೋಗಿದ್ದಾರೆ. ಅವರಿಗೆ ಯಾವಾಗ ಟೋಪಿ ಹಾಕುತ್ತಾರೋ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.