ಬೆಂಗಳೂರು: ಜಾತಕದಲ್ಲಿ ಕಾಣಿಸಿಕೊಂಡ ದೋಷ ಪರಿಹರಿಸಲು ತಮ್ಮ ಗುರು ಅಜ್ಜಯ್ಯ ನೀಡಿರುವ ಸಲಹೆ ಮೇರೆಗೆ ಇಂಧನ ಸಚಿವ ಡಿಕೆ ಶಿವಕುಮಾರ್ ಮಾಂಸಾಹಾರ ತ್ಯಜಿಸಿದ್ದಾರೆ.
ಹೌದು, ಕಳೆದ ಆರು ತಿಂಗಳಿನಿಂದ ಡಿಕೆ ಶಿವಕುಮಾರ್ ಅವರು ಮಾಂಸಾಹಾರ ತ್ಯಜಿಸಿದ್ದಾರೆ ಎಂದು ಖಚಿತ ಮೂಲಗಳು ತಿಳಿಸಿವೆ. ಈ ಹಿಂದೆ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರು ಸಹ ಮಾಂಸಾಹಾರ ಸೇವನೆ ತೊರೆದಿದ್ದರು.
1982 ರಿಂದ ದೇವೇಗೌಡ ಅವರು ಮಾಂಸಾಹಾರದಿಂದ ದೂರವಿದ್ದಾರೆ. ಈ ನಿರ್ಧಾರ ತೆಗೆದುಕೊಂಡ ಬಳಿಕ ಎಚ್‍ಡಿಡಿ ರಾಜಕೀಯದಲ್ಲಿ ಉನ್ನತ ಮಟ್ಟದ ಬದಲಾವಣೆ ಉಂಟಾಗಿ ಪ್ರಧಾನಿ ಹುದ್ದೆಗೆ ಏರಿದ್ದಾರೆ ಎನ್ನಲಾಗಿದೆ. 86 ವರ್ಷದ ಎಚ್‍ಡಿಡಿ ಸತತ 36 ವರ್ಷಗಳಿಂದ ಮಾಂಸಾಹಾರ ಸೇವನೆ ಮಾಡಿಲ್ಲ.
ಡಿಕೆ ಶಿವಕುಮಾರ್ ಅವರು ಹೆಚ್ಚಾಗಿ ಕಾಡು ಸಿದ್ದೇಶ್ವರ ಮಠದ ಅಜ್ಜಯ್ಯ ಅವರ ಮಾರ್ಗದರ್ಶನ ಪಡೆಯುತ್ತಾರೆ. ಐಟಿ ದಾಳಿಯ ವೇಳೆಯೂ ಅವರ ಸಲಹೆ ಪಡೆದಿದ್ದರು. ಅಲ್ಲದೇ ಅನಂತರದಲ್ಲಿ ಡಿಕೆಶಿ ಅವರ ಎದುರಾಳಿಗಳು ಎಷ್ಟೇ ರಾಜಕೀಯ ವಾಗ್ದಾಳಿ ನಡೆಸಿ ಪಂಥಾಹ್ವಾನ ನೀಡಿದ್ದರೂ ಅವರು ಮೌನವಹಿಸಿದ್ದರು. ಅಜ್ಜಯ್ಯ ಅವರ ಸಲಹೆ ಮೇರೆಗೆ ಡಿಕೆಶಿ ಮೌನಕ್ಕೆ ಶರಣಾಗಿದ್ದರು ಎಂದು ಹೇಳಲಾಗುತ್ತಿದೆ.
ಆದಾಯ ತೆರಿಗೆ ಇಲಾಖೆ ದಾಳಿ ಬಳಿಕ ಡಿಕೆಶಿ ಅವರು ಮೊಟ್ಟ ಮೊದಲು ಕಾಡು ಸಿದ್ದೇಶ್ವರ ಮಠದ ಅಜ್ಜಯ್ಯ ಅವರನ್ನು ಭೇಟಿ ಮಾಡಿ ಅಶೀರ್ವಾದ ಪಡೆದಿದ್ದರು. ಇದಾದ ಬಳಿಕ ಡಿಕೆಶಿ ಕುಟುಂಬ ಸದಸ್ಯರು ಕನಕಪುರದ ಕಬ್ಬಾಳಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದರು.