ಮಿಲಿಂದ್ ಗೌತಮ್ ಹಾಗೂ ರೆಚೆಲ್ ಡೇವಿಡ್ ಜೋಡಿಯಾಗಿ ನಟಿಸಿರುವ ‘ಅನ್ ಲಾಕ್ ರಾಘವ’ ಚಿತ್ರ ಈ ಶುಕ್ರವಾರ ಅಂದರೆ, ಫೆ.7ರಂದು ರಿಲೀಸ್ ಆಗುತ್ತಿದೆ. ಈ ವರ್ಷಾರಂಭದಲ್ಲಿಯೇ ಕನ್ನಡ ಚಿತ್ರರಂಗದಲ್ಲಿ ಹೊಸತನ ಗಾಳಿ ಮತ್ತಷ್ಟು ಆವೇಗದಿಂದ ಬೀಸಲಾರಂಭಿಸಿದೆ. ಯುವ ಆವೇಗದ ತಂಡಗಳು, ಅದಕ್ಕೆ ತಕ್ಕುದಾದ ಕಥನಗಳಿಂದ ತಯಾರಾಗಿರುವ ಸಿನಿಮಾಗಳು ಒಂದರ ಬೆನ್ನಿಗೊಂದರಂತೆ ರಿಲೀಸ್‌ಗೆ ಸಿದ್ಧವಾಗಿದೆ. ಆ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಚಿತ್ರ ಅನ್ ಲಾಕ್ ರಾಘವ. ಈಗಾಗಲೇ ಟ್ರೈಲರ್ ಸೇರಿದಂತೆ ಒಂದಷ್ಟು ಬಗೆಯಲ್ಲಿ ಪ್ರೇಕ್ಷಕರನ್ನು ಆವರಿಸಿಕೊಂಡಿರುವ ಈ ಚಿತ್ರವನ್ನು ದೀಪಕ್ ಮಧುವನಹಳ್ಳಿ ನಿರ್ದೇಶನ ಮಾಡಿದ್ದಾರೆ. ಇದನ್ನೂ ಓದಿ:ಅನ್ ಲಾಕ್ ರಾಘವನ ಬಗ್ಗೆ ನಿರ್ಮಾಪಕ ಮಂಜುನಾಥ್ ಹೇಳಿದ್ದಿಷ್ಟು!
ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರಿನಡಿಯಲ್ಲಿ ಮಂಜುನಾಥ್ ದಾಸೇಗೌಡ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಐಫ್ಲೆಕ್ಸ್ ಬ್ಯಾನರ್ ಮೂಲಕ ಗಿರೀಶ್ ಕುಮಾರ್ ನಿರ್ಮಾಣ ಕಾರ್ಯದಲ್ಲಿ ಸಾಥ್ ಕೊಟ್ಟಿದ್ದಾರೆ. ‘ಅನ್ ಲಾಕ್ ರಾಘವ’ ಅನ್ನೋ ಟೈಟಲ್ ಕೇಳಿದಾಕ್ಷಣವೇ ಒಂದಷ್ಟು ಬಗೆಯ ಕಲ್ಪನೆ ಸಹಜವಾಗಿಯೇ ಮೂಡಿಕೊಳ್ಳುತ್ತೆ. ಅಷ್ಟಕ್ಕೂ ಇಲ್ಲಿ ಅನ್ ಲಾಕ್ ಮಾಡೋದು ಏನನ್ನು? ಇಲ್ಲಿನ ಕಥೆ ನಿಜಕ್ಕೂ ಹೇಗಿದೆ ಅಂತೆಲ್ಲ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಚಿತ್ರತಂಡ ಮಾತ್ರ ಟ್ರೈಲರ್‌ನಲ್ಲಿಯೂ ಅದರ ಬಗ್ಗೆ ಸೂಚನೆ ಬಿಟ್ಟುಕೊಡದೆ ಗೌಪ್ಯತೆ ಕಾಪಾಡಿಕೊಂಡಿದೆ. ಆದರೆ, ಇಲ್ಲಿ ಯುವ ಸಮುದಾಯ ಸೇರಿದಂತೆ ಎಲ್ಲ ವಯೋಮಾನದವರನ್ನು, ಎಲ್ಲಾ ಅಭಿರುಚಿಯ ಪ್ರೇಕ್ಷಕ ವರ್ಗವನ್ನು ಚಕಿತಗೊಳಿಸಬಲ್ಲ ಅಂಶಗಳಿವೆ ಅನ್ನೋದು ಚಿತ್ರತಂಡದ ಭರವಸೆ.
ಈಗಾಗಲೇ ಒಂದು ಸಿನಿಮಾದಲ್ಲಿ ನಟಿಸಿ, ನಟನಾಗಲು ಬೇಕಾದ ಎಲ್ಲ ತರಬೇತಿಯನ್ನೂ ಪಡೆದುಕೊಂಡಿರುವ ಮಿಲಿಂದ್ ಗೌತಮ್ ಈ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಒಟ್ಟಾರೆ ಸಿನಿಮಾದಲ್ಲಿ ಮೈ ನವಿರೇಳಿಸುವ ಸಾಹಸ ಸನ್ನಿವೇಶಗಳು, ಎಲ್ಲರ ಮನಸಿಗಿಳಿಯ ಬಲ್ಲ ನವಿರು ಪ್ರೇಮ ಕಥನ ಹಾಗೂ ಹೆಜ್ಜೆ ಹೆಜ್ಜೆಯಲ್ಲೂ ಮುದ ನೀಡೋ ಭರ್ಜರಿ ಮನರಂಜನೆ ಇದೆ ಎಂಬ ವಿಚಾರವನ್ನು ಚಿತ್ರತಂಡ ಖಚಿತಪಡಿಸಿದೆ. ಸತ್ಯಪ್ರಕಾಶ್ ಈ ಚಿತ್ರಕ್ಕೆ ಕಥೆ ಚಿತ್ರಕಥೆ ಸಂಭಾಷಣೆ ಬರೆದಿದ್ದಾರೆ.
ಶೋಭರಾಜ್, ಸಾಧು ಕೋಕಿಲಾ, ಕಡೂರು ಧರ್ಮಣ್ಣ, ಸಾಯಿ ಕುಡ್ಲ, ಭೂಮಿ ಶೆಟ್ಟಿ, ಸುಂದರ್, ವೀಣಾ ಸುಂದರ್ ರಮೇಶ್ ಭಟ್ ಮುಂತಾದವರು ನಟಿಸಿದ್ದಾರೆ. ರೆಚೆಲ್ (Rachel David) ನಾಯಕಿಯಾಗಿ ಮಿಲಿಂದ್‌ಗೆ ಸಾಥ್ ಕೊಟ್ಟಿದ್ದಾರೆ. ಲವಿತ್ ಛಾಯಾಗ್ರಹಣ, ವಿನೋದ್ ಮಾಸ್ಟರ್ ಮತ್ತು ಅರ್ಜುನ್ ಮಾಸ್ಟರ್ ಸಾಹಸ ನಿರ್ದೇಶನ, ಅನೂಪ್ ಸಿಳೀನ್ ಸಂಗೀತ, ಅಜಯ್ ಮತ್ತು ಮಧು ತುಂಬಕೆರೆ ಸಂಕಲನ ಈ ಚಿತ್ರಕ್ಕಿದೆ.