ಮಹಿಳೆಯರ ವೇತನ ಸಹಿತ ಒಂದು ದಿನದ ರಜೆ ದೇಶಾದ್ಯಂತ ಸದ್ದು ಮಾಡುತ್ತಿದೆ. ಸದ್ಯ ಮಹಿಳೆಯರ ವೇತನ ಸಹಿತ ಋತುಚಕ್ರ ರಜೆ ಕುರಿತು ನೀತಿ ರೂಪಿಸಬೇಕೆಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಮಹಿಳೆಯರಿಗೆ ವೇತನ ಸಹಿತ ರಜೆ ಕಡ್ಡಾಯಗೊಳಿಸಿದರೆ ಆಕೆ ಉದ್ಯೋಗಾವಕಾಶಗಳಿಂದ ವಂಚಿತಳಾಗಬಹುದು ಎಂದು ಸುಪ್ರೀಂ ತಿಳಿಸಿದೆ. ಹಾಗಿದ್ರೆ ಬೇರೆ ದೇಶಗಳಲ್ಲಿ ಈ ಋತುಚಕ್ರ ರಜೆಯ ಕುರಿತು ಏನೇನು ನೀತಿಗಳಿವೆ? ಭಾರತದ ಯಾವ ರಾಜ್ಯಗಳು ಇದನ್ನು ಜಾರಿಗೆ ತಂದಿವೆ ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.
ಮುಟ್ಟಿನ ರಜೆ:
ಮಹಿಳಾ ಉದ್ಯೋಗಿಗಳಿಗೆ ತಿಂಗಳಿಗೊಂದು ವೇತನ ಸಹಿತ ಮುಟ್ಟಿನ ರಜೆ ನೀಡುವ ʼಮುಟ್ಟಿನ ರಜೆ ನೀತಿʼ ಅನ್ನು ಕರ್ನಾಟಕ ರಾಜ್ಯ ಸಚಿವ ಸಂಪುಟ ಅಂಗೀಕರಿಸಿದೆ. ಈ ಬಗ್ಗೆ ದೇಶವ್ಯಾಪಿ ಪರ-ವಿರೋಧ ಚರ್ಚೆಗಳು ನಡೆಯುತ್ತಿದೆ. ಸರ್ಕಾರಿ, ಖಾಸಗಿ ವಲಯಗಳಿಗೂ ಅನ್ವಯವಾಗುವಂತೆ ಈ ನಿರ್ಧಾರ ಕೈಗೊಂಡ ಮೊದಲ ರಾಜ್ಯ ಕರ್ನಾಟಕ.
ಮಹಿಳೆಯರಿಗೆ ಮುಟ್ಟಿನ ರಜೆಯನ್ನು ಕಾನೂನುಬದ್ಧಗೊಳಿಸಲು ನೀತಿ ರೂಪಿಸುವಂತೆ ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ಹಿಂದೆಯೇ ಸೂಚಿಸಿತ್ತು. ಬೆರಳೆಣಿಕೆಯ ರಾಜ್ಯಗಳಲ್ಲಿ ಮಾತ್ರ ಕೆಲವು ವಲಯಗಳಿಗೆ ಸೀಮಿತಗೊಳಿಸಿ ಮುಟ್ಟಿನ ರಜೆಯ ಸೌಲಭ್ಯ ಕಲ್ಪಿಸಲಾಗಿದೆ.
ಮುಟ್ಟಿನ ರಜೆಯ ಪರಿಕಲ್ಪನೆ 20ನೇ ಶತಮಾನದ ಆರಂಭದಲ್ಲೇ ಅಸ್ತಿತ್ವಕ್ಕೆ ಬಂದಿತ್ತು. ಸೋವಿಯತ್ ರಷ್ಯಾ 1920ರ ಆಸುಪಾಸಿನಲ್ಲಿ ಮಹಿಳೆಯರಿಗೆ ವೇತನ ಸಹಿತ ರಜೆ ನೀಡಿತ್ತು. ಆದರೆ ಅಲ್ಲಿನ ಮಹಿಳೆಯರಿಗೆ ಅವಕಾಶಗಳು ಕಡಿಮೆಯಾಗಿ ಕೆಲವೇ ವರ್ಷಗಳಲ್ಲಿ ರದ್ದಾಯಿತು. ಕಳೆದ ಒಂದು ದಶಕದಲ್ಲಿ ಹಲವು ರಾಷ್ಟ್ರಗಳಲ್ಲಿ ಈ ರಜೆಯ ಸೌಲಭ್ಯವನ್ನು ನೀಡಲಾಗುತ್ತಿದೆ.
ಯಾವ್ಯಾವ ರಾಷ್ಟ್ರಗಳಲ್ಲಿ ರಜೆ ನೀತಿ?
ಸ್ಪೇನ್:
ಯುರೋಪಿನಲ್ಲೇ ಮೊದಲ ಬಾರಿಗೆ ಋತುಚಕ್ರ ರಜೆಯನ್ನು ಜಾರಿಗೊಳಿಸಿದ ರಾಷ್ಟ್ರ ಸ್ಪೇನ್. 2023ರಲ್ಲಿ ಈ ನೀತಿಯನ್ನು ಜಾರಿಗೆ ತಂದಿದ್ದು, 3-5 ದಿನಗಳ ವೇತನ ಸಹಿತ ಮುಟ್ಟಿನ ರಜೆಯನ್ನು ತೆಗೆದುಕೊಳ್ಳಬಹುದು. ಆದರೆ ಇದಕ್ಕೆ ವೈದ್ಯರ ಟಿಪ್ಪಣಿ ಅಗತ್ಯ. ಇದು ವೇತನ ಸಹಿತ ರಜೆ ಆಗಿದ್ದರೂ ಸಹ ಆ ದಿನಗಳಲ್ಲಿ ದಿನ ಸಂಬಳದ 75% ಸಂಬಳ ಮಾತ್ರ ಸರ್ಕಾರ ಪಾವತಿ ಮಾಡುತ್ತದೆ.
ಇಂಡೋನೇಷ್ಯಾ:
ಇಂಡೋನೇಷ್ಯಾದಲ್ಲಿ 2003ರಿಂದಲೇ ಈ ನೀತಿ ಜಾರಿಯಲ್ಲಿದೆ. ಮುಟ್ಟಿನ ಸಮಯದಲ್ಲಿ ಮೊದಲ ಎರಡು ದಿನಗಳಿಗೆ ವೇತನ ಸಹಿತ ರಜೆ ನೀಡುವುದಕ್ಕೆ ಇಲ್ಲಿ ಅವಕಾಶವಿದೆ. ಆದರೆ ರಜೆ ನೀಡುವುದು ಆಯಾಯಾ ಕಂಪನಿಯ ವಿವೇಚನೆಗೆ ಬಿಡಲಾಗಿದೆ. ಹಾಗಾಗಿ ಇಲ್ಲಿ ಕಡ್ಡಾಯ ರಜೆ ನೀಡಬೇಕು ಎಂಬುದಿಲ್ಲ.
ಜಪಾನ್:
1947ರಲ್ಲೇ ಜಪಾನ್‌ನಲ್ಲಿ ಈ ಸಂಬಂಧ ಶಾಸನ ಜಾರಿಗೆ ಬಂದಿದೆ. ಇದರ ಪ್ರಕಾರ, ಕಠಿಣ ಕೆಲಸ ಮಾಡುವ ಮಹಿಳೆಯರಿಗೆ ಋತುಚಕ್ರದ ಸಮಯದಲ್ಲಿ ಕೆಲಸ ಮಾಡುವಂತೆ ಕಂಪನಿಗಳು ಸೂಚಿಸುವಂತಿಲ್ಲ. ಮಹಿಳೆಯರು ಈ ಸಂದರ್ಭದಲ್ಲಿ ರಜೆ ತೆಗೆದುಕೊಳ್ಳಬಹುದು. ಆದರೆ ರಜಾ ದಿನದ ವೇತನ ಪಾವತಿ ಕಡ್ಡಾಯವಲ್ಲ.
ದಕ್ಷಿಣ ಕೊರಿಯಾ:
ದಕ್ಷಿಣ ಕೊರಿಯಾ ಮಹಿಳಾ ಉದ್ಯೋಗಿಗಳಿಗೆ 1953ರಲ್ಲೇ ವೇತನ ಸಹಿತ ಮುಟ್ಟಿನ ರಜೆಯನ್ನು ನೀಡಿದೆ. 2007ರಲ್ಲಿ ಈ ಕಾನೂನನ್ನು ಪರಿಷ್ಕರಿಸಿದೆ.
ತೈವಾನ್:
ಮುಟ್ಟಿನ ದಿನಗಳಲ್ಲಿ ತೀವ್ರ ನೋವಿನಿಂದಾಗಿ ಕೆಲಸ ಮಾಡಲು ಸಾಧ್ಯವಿಲ್ಲದವರು ತಿಂಗಳಿಗೆ ಒಂದು ದಿನ ರಜೆ ಪಡೆಯುವ ಅವಕಾಶ ತೈವಾನ್‌ನಲ್ಲಿದೆ. ಆ ಸಂದರ್ಭದಲ್ಲಿ ರಜಾ ದಿನದ ಅರ್ಧ ಸಂಬಳವನ್ನು ಪಾವತಿಸಲಾಗುತ್ತದೆ.
ವಿಯೇಟ್ನಾಂ:
ವಿಯೇಟ್ನಾಂನಲ್ಲಿ ಪ್ರತಿ ತಿಂಗಳು ಮಹಿಳಾ ಉದ್ಯೋಗಿಗಳು ಮೂರು ದಿನ ರಜೆ ಪಡೆಯಬಹುದು. ಆ ದಿನದ ವೇತನ ಪಾವತಿ ಕಡ್ಡಾಯವಲ್ಲ. ಕೆಲಸಕ್ಕೆ ಬಂದರೆ ಪ್ರತಿ ದಿನ 30 ನಿಮಿಷ ವಿಶ್ರಾಂತಿ ಪೆಯಲು ಅವಕಾಶವನ್ನು ನೀಡಲಾಗಿದೆ. ರಜೆ ಪಡೆದ ಉದ್ಯೋಗಿಗಳಿಗೆ ಹೆಚ್ಚುವರಿ ವೇತನ ನೀಡಲಾಗುತ್ತದೆ.
ಝಾಂಬಿಯಾ:
ಇಲ್ಲಿ ಪ್ರತಿ ತಿಂಗಳು ʼತಾಯಂದಿರ ದಿನʼ ಆಚರಿಸಲಾಗುತ್ತದೆ. ಮಹಿಳಾ ಉದ್ಯೋಗಿಗಳು ಕಾರಣ ನೀಡದೆ ತಿಂಗಳಿಗೆ ಒಂದು ರಜೆ ತೆಗೆದುಕೊಳ್ಳಬಹುದು. ಆದರೆ ವೇತನ ಪಾವತಿ ಕಡ್ಡಾಯವಲ್ಲ.
ಭಾರತದ ಯಾವ ರಾಜ್ಯದಲ್ಲಿ ಜಾರಿಯಾಗಿದೆ?
ಬಿಹಾರ:
ಉದ್ಯೋಗಿಗಳಿಗೆ ಮುಟ್ಟಿನ ರಜೆ ಸೌಲಭ್ಯ ನೀಡಿದ ಮೊದಲ ರಾಜ್ಯ ಬಿಹಾರ. ಅಲ್ಲಿ, ಮುಟ್ಟಿನ ಸಂದರ್ಭದಲ್ಲಿ ಸತತ ಎರಡು ದಿನ ರಜೆ ನೀಡಲಾಗುತ್ತಿದೆ. ಆದರೆ ಈ ಸೌಲಭ್ಯ ಸರ್ಕಾರಿ ನೌಕರರಿಗೆ ಮಾತ್ರ ಸೀಮಿತವಾಗಿದೆ. 1992ರ ಜ.2ರಂದು ಅಂದಿನ ಮುಖ್ಯಮಂತ್ರಿ ಲಾಲೂ ಪ್ರಸಾದ್ ಈ ನಿರ್ಧಾರ ಕೈಗೊಂಡಿದ್ದರು.
ಕೇರಳ:
ಕೊಚ್ಚಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪ್ರಯತ್ನದ ಫಲವಾಗಿ ಕೇರಳದ ವಿಶ್ವವಿದ್ಯಾಲಯಗಳಲ್ಲಿ ಮುಟ್ಟಿನ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ರಜೆ ನೀಡುವ ಪರಿಪಾಠ ಆರಂಭಿಸಲಾಯಿತು. ಮುಟ್ಟಿನ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು 2023ರ ಜನವರಿಯಲ್ಲಿ ಉನ್ನತ ಶಿಕ್ಷಣ ಸಚಿವೆ ಆರ್.ಬಿಂದು ವಿದ್ಯಾರ್ಥಿನಿಯರಿಗೆ ಹಾಜಾರಾತಿಯಲ್ಲಿ 2% ವಿನಾಯಿತಿ ಘೋಷಿಸಿದರು.
ಒಡಿಶಾ:
ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗಿಗಳಿಗೆ ಒಂದು ದಿನ ವೇತನ ಸಹಿತ ಮುಟ್ಟಿನ ರಜೆ ನೀಡುವುದಾಗಿ 2024ರ ಸ್ವಾತಂತ್ರ್ಯೋತ್ಸವದಂದು ಆಗಿನ ಡಿಸಿಎಂ ಪ್ರವತಿ ಪರಿದಾ ಘೋಷಿಸಿದ್ದರು.
ಸಿಕ್ಕಿಂ:
ರಾಜ್ಯದ ಹೈಕೋರ್ಟ್‌ನಲ್ಲಿ ಮಹಿಳಾ ಉದ್ಯೋಗಿಗಳಿಗೆ ವೈದ್ಯರ ಶಿಫಾರಸಿನ ಆಧಾರದಲ್ಲಿ 2-3 ದಿನ ಮುಟ್ಟಿನ ರಜೆ ಪಡೆಯಬಹುದಾದ ಸೌಲಭ್ಯ ನೀಡಲಾಗಿದೆ. ಸಿಕ್ಕಿಂ ವಿಶ್ವವಿದ್ಯಾಲಯದಲ್ಲೂ ವಿದ್ಯಾರ್ಥಿನಿಯರಿಗೆ ಮತ್ತು ಸಿಬ್ಬಂದಿಗೆ ಒಂದು ದಿನದ ಮುಟ್ಟಿನ ರಜೆ ನೀಡಲಾಗುತ್ತದೆ. ಆದರೆ ಈ ಸೌಲಭ್ಯ ಕೇವಲ ಕೆಲವು ವಲಯ/ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿದೆ.



