Connect with us

Latest

ಕೊನೆಗೂ ಸಿಕ್ಕಿದ್ರು ನಿರ್ಭಯ ಅತ್ಯಾಚಾರಿಗಳನ್ನು ಗಲ್ಲಿಗೇರಿಸುವ ವ್ಯಕ್ತಿ

Published

on

ನವದೆಹಲಿ: ನಿರ್ಭಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಹಂತಕರನ್ನು ಗಲ್ಲಿಗೇರಿಸಲು ತಿಹಾರ್ ಜೈಲಿನಲ್ಲಿ ಪೂರ್ವತಯಾರಿ ನಡೆಯುತ್ತಿದ್ದು, ಕಾಮುಕರನ್ನು ಗಲ್ಲಿಗೇರಿಸುವ ವ್ಯಕ್ತಿಗಾಗಿ ಜೈಲಿನ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದರು. ಕೊನೆಗೂ ಕಾಮುಕರ ಹುಟ್ಟಡಗಿಸಲು ಉತ್ತರ ಪ್ರದೇಶದ ಮೀರತ್ ಜೈಲಿನಿಂದ ಹ್ಯಾಂಗ್‍ಮ್ಯಾನ್ ಬರಲಿದ್ದಾರೆ.

ಈಗಾಗಲೇ ನಿರ್ಭಯ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಲು ಅಗತ್ಯವಾಗಿರುವ ನೇಣು ಕುಣಿಕೆಯನ್ನು ತಯಾರಿಸುವಂತೆ ಬಿಹಾರದ ಬಕ್ಸರ್ ಜೈಲು ಅಧಿಕಾರಿಗಳಿಗೆ ತಿಹಾರ್ ಜೈಲಿನ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಆದರೆ ತಿಹಾರ್ ಜೈಲಿನಲ್ಲಿ ಯಾವುದೇ ಹ್ಯಾಂಗ್‍ಮ್ಯಾನ್ ಇರದ ಹಿನ್ನೆಲೆ ಸೋಮವಾರ ಈ ಕೆಲಸಕ್ಕಾಗಿ ಸಿಬ್ಬಂದಿ ಬೇಕು ಎಂದು ಅಧಿಕಾರಿಗಳು ದೇಶದ ಹಲವು ಜೈಲುಗಳ ಮೊರೆಹೋಗಿದ್ದರು.

ಈ ವೇಳೆ ಮೀರತ್ ಜೈಲಿನಲ್ಲಿ ಇಬ್ಬರು ಹ್ಯಾಂಗ್‍ಮೆನ್ ಇರುವ ಬಗ್ಗೆ ತಿಹಾರ್ ಜೈಲಿನ ಅಧಿಕಾರಿಗಳಿಗೆ ತಿಳಿದಿದ್ದು, ಬುಧವಾರ ಮೀರತ್ ಜೈಲಿಗೆ ಪತ್ರ ಬರೆದು ಓರ್ವ ಹ್ಯಾಂಗ್‍ಮ್ಯಾನ್‍ನನ್ನು ತಿಹಾರ್ ಜೈಲಿಗೆ ಕಳುಹಿಸಿಕೊಡಿ ಎಂದು ಮನವಿ ಮಾಡಲಾಗಿತ್ತು. ಆದರೆ ಯಾರನ್ನು? ಯಾವಾಗ ಗಲ್ಲಿಗೇರಿಸಲಾಗುತ್ತಿದೆ ಎಂಬ ಬಗ್ಗೆ ಪತ್ರದಲ್ಲಿ ತಿಳಿಸಿರಲಿಲ್ಲ. ಅದರ ಬದಲಿಗೆ ಕೆಲವು ಅಪರಾಧಿಗಳಿಗೆ ಗಲ್ಲಿಗೇರಿಸಬೇಕಿದೆ, ಎಲ್ಲಾ ಕಾನೂನು ಪ್ರಕಿಯೆ ಮುಗಿದಿದೆ ಎಂದು ಉಲ್ಲೇಖಿಸಲಾಗಿತ್ತು.

ಈ ಮನವಿ ಮೇರೆಗೆ ಮೀರತ್ ಜೈಲಿನ ಹ್ಯಾಂಗ್‍ಮ್ಯಾನ್ ಪವನ್ ಕುಮಾರ್ ಅವರನ್ನು ತಿಹಾರ್ ಜೈಲಿಗೆ ಕಳುಹಿಸಲಾಗುತ್ತಿದೆ. ಇವರು ನಿರ್ಭಯ ಪ್ರಕರಣದ ಅಪರಾಧಿಗಳನ್ನು ಸದ್ಯದಲ್ಲೇ ಗಲ್ಲಿಗೇರಿಸಲಿದ್ದಾರೆ.

ತಿಹಾರ್ ಜೈಲಿನ ಅಧಿಕಾರಿಗಳು ಹ್ಯಾಂಗ್‍ಮ್ಯಾನ್‍ಗಾಗಿ ಹುಡುಕಾಟ ನಡೆದಿಸುತ್ತಿದ್ದ ವೇಳೆ ತಮಿಳುನಾಡಿನ ರಾಮನಾಥಪುರಂನ ಹೆಡ್ ಕಾನ್‍ಸ್ಟೇಬಲ್ ಎಸ್. ಸುಭಾಷ್ ಶ್ರೀನಿವಾಸನ್(42) ಸ್ವಯಂಪ್ರೇರಿತರಾಗಿ ಈ ಕಾರ್ಯವನ್ನು ನಡೆಸಲು ಮುಂದೆ ಬಂದಿದ್ದರು.

ಈ ಬಗ್ಗೆ ತಿಹಾರ್ ಜೈಲಿಗೆ ಪತ್ರ ಬರೆದಿದ್ದ ಸುಭಾಷ್ ಅವರು, ನೀವು ನನಗೆ ಈ ಕಾರ್ಯ ನಿರ್ವಹಿಸಲು ಯಾವುದೇ ಸಂಬಳವನ್ನು ನೀಡಬೇಡಿ, ನೀವು ನನಗೆ ಈ ಅಪರಾಧಿಗಳನ್ನು ಗಲ್ಲಿಗೇರಿಸಲು ಅವಕಾಶ ಕೊಡಿ ಅಷ್ಟೇ ಸಾಕು ಎಂದು ತಿಳಿಸಿದ್ದರು.

ಈ ಹಿಂದೆ 2015ರಲ್ಲಿ ಪವನ್ ಕುಮಾರ್ ಅವರು ಭಾರೀ ಸುದ್ದಿಯಾಗಿದ್ದರು. ಗಲ್ಲಿಗೇರಿಸುವ ಕೆಲಸಕ್ಕೆ ಅವರಿಗೆ ಸರಿಯಾಗಿ ಸಂಬಳ ನೀಡುತ್ತಿರಲಿಲ್ಲ. ಹೀಗಾಗಿ ಹಣಕ್ಕಾಗಿ ಅವರು ಒಂದು ಕಚೇರಿಯಿಂದ ಇನ್ನೊಂದು ಕಚೇರಿಗೆ ಅಲೆದು ಬೇಸತ್ತು ಹೋಗಿದ್ದರು. ತಿಂಗಳ ಸಂಬಳ ಮಾತ್ರವಲ್ಲ ಅಪರಾಧಿಗಳನ್ನು ಗಲ್ಲಿಗೇರಿಸಿದರೆ 3 ಸಾವಿರ ರೂ. ನನಗೆ ನೀಡಬೇಕು. ಆದರೆ ಯಾವ ಹಣವು ನನಗೆ ಸಿಗುತ್ತಿಲ್ಲ ಎಂದು ಅಳಲನ್ನು ತೋಡಿಕೊಂಡಿದ್ದರು.

ಪವನ್ ಕುಮಾರ್ ಅವರು ಭಾರತದಲ್ಲಿರುವ ಕೆಲವೇ ಕೆಲವು ಅಧಿಕೃತ ನೊಂದಾಯಿತ ವೃತ್ತಿಪರ ಹ್ಯಾಂಗ್‍ಮ್ಯಾನ್‍ಗಳಲ್ಲಿ ಒಬ್ಬರು. ಈ ಹಿಂದೆ ಅವರು ಮೀರತ್ ಜೈಲಿನಲ್ಲಿ ನಿಥಾರಿ ಸಿರಿಯಲ್ ಕಿಲ್ಲರ್ ಸುರೇಂದ್ರ ಕೋಲಿಯನ್ನು ಗಲ್ಲಿಗೇರಿಸಿದ್ದರು.

Click to comment

Leave a Reply

Your email address will not be published. Required fields are marked *