ವಿಜಯಪುರ: ನಗರದಲ್ಲಿ ಖತರ್ನಾಕ್ ಮುಸುಕುಧಾರಿಗಳ ಗ್ಯಾಂಗ್ ದಾಂಧಲೆ ನಡೆಸಿದೆ. ರಾತ್ರೋ ರಾತ್ರಿ ಮನೆಗೆ ನುಗ್ಗಿ ದಾಂಧಲೆ ಸೃಷ್ಟಿಸಿದ ಮುಸುಕುಧಾರಿಗಳು ನಗರದ ಜೈನಾಪೂರ ಲೈಔಟ್‌ನಲ್ಲಿ ಅಟ್ಟಹಾಸ ಮೆರೆದಿದ್ದಾರೆ. ವ್ಯಕ್ತಿಯೋರ್ವನಿಗೆ ಚಾಕುವಿನಿಂದ ಹಲ್ಲೆ ಮಾಡಿ ಬಂಗಾರ ದೋಚಿ ಪರಾರಿಯಾಗಿದ್ದಾರೆ. ದರೋಡೆಕೋರರ ಬೆನ್ನುಹತ್ತಿದ್ದ ಪೊಲಿಸರು ಗುಂಡಿನ ದಾಳಿ ಮಾಡಿದ್ದಾರೆ.
Advertisement
ಕೈಯ್ಯಲ್ಲಿ ಕೊಡಲಿ, ರಾಡ್, ತಲ್ವಾರ್ ಹಿಡಿದು ಬರ್ತಿರೋ ಮುಸುಕುಧಾರಿ ಗ್ಯಾಂಗ್ ವಿಜಯಪುರ ಜಿಲ್ಲೆಯ ಜನರ ನಿದ್ದೆಗೆಡಿಸಿದೆ. ಮುಸುಕುಧಾರಿಗಳ ಗ್ಯಾಂಗ್ ಜಿಲ್ಲೆಯಲ್ಲಿ ಆಕ್ಟೀವ್ ಆಗಿದ್ದು, ಒಂದು ವಾರದಲ್ಲಿ ಜಿಲ್ಲೆಯ ಮೂರು ಕಡೆ ದರೋಡೆ ನಡೆಸಿದ್ದಾರೆ. ಗುರುವಾರ ತಡರಾತ್ರಿ ನಗರದ ಜೈನಾಪುರ ಬಡಾವಣೆಯಲ್ಲಿ ಸಂತೋಷ ಎಂಬುವರ ಮನೆಯ ಬಾಗಿಲು ಮುರಿದು ನುಗ್ಗಿ ಸಂತೋಷನ ಪತ್ನಿಯ ಬಂಗಾರದ ಮಾಂಗಲ್ಯ ಸರ ಕದ್ದಿದ್ದಾರೆ. ಅಲ್ಲದೇ ಇದನ್ನ ತಡೆಯಲು ಬಂದ ಸಂತೋಷನ ಮೇಲೆ ಚಾಕುವಿನಿಂದ ಮೂರು ಕಡೆ ಚುಚ್ಚಿ ಮೊದಲನೇ ಮಹಡಿಯಿಂದ ಬಿಸಾಕಿ ಪರಾರಿಯಾಗಿದ್ದಾರೆ. ಈ ದರೋಡೆಕೋರರನ್ನ ಬೆನ್ನುಹತ್ತಿದ್ದ ಗೋಲ್‌ಗುಂಬಜ್ ಪೊಲೀಸರ ಶುಕ್ರವಾರ (ಇಂದು) ಬೆಳಗ್ಗಿನ ಜಾವ ನಗರದ ಹೊರವಲಯದ ಬೆಂಗಳೂರಿನ ಟೋಲ್ ಬಳಿ ದರೋಡೆಕೋರರನ್ನ ಚೇಸ್ ಮಾಡಿದ್ದಾರೆ. ಆಗ ಬೈಕ್ ಮೇಲಿಂದ ತಪ್ಪಿಸಿಕೊಳ್ಳಲು ದರೋಡೆಕೋರರು ಯತ್ನಿಸಿದ್ದು ಪೊಲೀಸರು ಗುಂಡು ಹಾರಿಸಿದ್ದಾರೆ.
Advertisement
Advertisement
ಈ ವೇಳೆ ಒಟ್ಟು ನಾಲ್ವರು ದರೋಡೆಕೋರರು ಇದ್ದರು ಎನ್ನಲಾಗಿದೆ. ಪೊಲೀಸರು 5 ಸುತ್ತು ಗುಂಡು ಹಾರಿಸಿದ್ದು, ಅದರಲ್ಲಿ ಓರ್ವ ಆರೋಪಿ ಕಾಲಿಗೆ ಮೂರು ಗುಂಡು ತಗುಲಿದೆ. ಮಧ್ಯಪ್ರದೇಶ ಮೂಲದ ಮಹೇಶ್ ಎಂಬ ಆರೋಪಿಗೆ ಗುಂಡು ತಗುಲಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಒಳಪಡಿಸಲಾಗಿದೆ.
Advertisement
ವಿಜಯಪುರದ ಕನಕದಾಸ ಬಡಾವಣೆಯಲ್ಲಿ ಕಳ್ಳತನಕ್ಕೆ ಸ್ಕೆಚ್ ಹಾಕಿದ್ದಾಗ, ಪೊಲೀಸರ ಕಣ್ಣಿಗೆ ಬಿದ್ದಿದ್ದಾರೆ. ಆಗ ಅವರನ್ನ ಪೋಲಿಸರು ಚೇಸ್ ಮಾಡಿದ್ದಾರೆ. ದರೋಡೆಕೋರರು ಬೈಕ್ ಮೇಲೆ ಪರಾರಿಯಾಗಲು ಯತ್ನಿಸಿದ್ದಾಗ ಗುಂಡು ಹಾರಿಸಿದ್ದು, ಎಡಗಾಲಿಗೆ 2 ಗುಂಡು, ಬಲಗಾಲಿಗೆ ಒಂದು ಗುಂಡು ತಗುಲಿದೆ. ಸದ್ಯ ಆರೋಪಿ ಮಹೇಶ್‌ನ ಆರೋಗ್ಯ ಸ್ಥರವಾಗಿದೆ. ಸ್ಕ್ಯಾನಿಂಗ್‌ಗೆ ಒಳಪಡಿಸಿದ ನಂತರ ಗುಂಡು ತಗುಲಿದೆಯಾ ಇಲ್ವಾ ಅನ್ನೊದು ಗೊತ್ತಾಗಲಿದೆ ಅಂತಾ ಜಿಲ್ಲಾಸ್ಪತ್ರೆಯ ಸರ್ಜನ್ ಶಿವಾನಂದ ಮಾಸ್ತಿಹೊಳಿ ʻಪಬ್ಲಿಕ್ ಟಿವಿʼಗೆ ಸ್ಪಷ್ಟಪಡಿಸಿದ್ದಾರೆ.
ಇನ್ನೂ ಮೂವರು ದರೋಡೆಕೋರರು ಪರಾರಿಯಾಗಿದ್ದು, ಪೊಲೀಸರು ಶೋಧ ನಡೆಸಿದ್ದಾರೆ. ಈ ನಡುವೆ ಕೆಲವು ಸ್ಥಳೀಯರು ದರೋಡೆಕೋರರನ್ನ ಹಿಡಿಯಲು ಹಕ್ಕು ಕೊಡಿ, ನಾವು ರಾತ್ರಿ ಹೊತ್ತು ಗಸ್ತು ಕಾಯುತ್ತೇವೆ ಅಂತ ಪೊಲೀಸರಿಗೆ ಮನವಿ ಮಾಡಿದ್ದಾರೆ.