ಚಂಡೀಗಡ: ಅಮೃತಸರದ ರಾಜಾಸನ್ಸಿ ಪ್ರದೇಶದಲ್ಲಿ ಸಹಾಯಕ ಸಬ್-ಇನ್ಸ್‌ಪೆಕ್ಟರ್ (ಎಎಸ್‌ಐ) ಒಬ್ಬರ ಮೇಲೆ ಗುಂಡು ಹಾರಿಸಿದ್ದ ಆರೋಪಿ ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿದ್ದಾನೆ.
ಎಎಸ್‌ಐ ಜಸ್ವಂತ್ ಸಿಂಗ್ ಅವರ ಮೇಲೆ ಸೆ.11 ರಂದು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಈ ಸಂಬಂಧ ಆರೋಪಿ ಕರಣ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಸೆ.23ರ ರಾತ್ರಿ ಆರೋಪಿ ಅಡಗಿಸಿಟ್ಟಿದ್ದ ಶಸ್ತ್ರಾಸ್ತ್ರವನ್ನು ವಶಪಡಿಸಿಕೊಳ್ಳಲು ಮಜಿಥಾ ಪ್ರದೇಶಕ್ಕೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಕರಣ್ ಪೊಲೀಸ್ ವಶದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಇದನ್ನೂ ಓದಿ: ಬಿ.ಟೆಕ್ ಅರ್ಧಕ್ಕೆ ನಿಲ್ಲಿಸಿ ಕಳ್ಳತನ ವೃತ್ತಿ, ಬಾಂಗ್ಲಾದಲ್ಲಿ ಪೌರತ್ವ, – ಬೆಂಗಳೂರಿಗೆ ಕಾಲಿಟ್ಟು ಪೊಲೀಸ್ ಅತಿಥಿಯಾದ ಹೈಫೈ ಖದೀಮ!
ಪರಾರಿಯಾಗಿರುವ ಆರೋಪಿಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ. ಈ ಘಟನೆಯ ಬಳಿಕ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು ಅಮಾನತು ಮಾಡಲಾಗಿದೆ. ಆರೋಪಿ ಹೇಗೆ ಪರಾರಿಯಾದ ಎಂಬ ಬಗ್ಗೆ ಪೊಲೀಸರು ಇಲ್ಲಿಯವರೆಗೆ ಯಾವುದೇ ಮಾಹಿತಿ ನೀಡಿಲ್ಲ.
ಈ ಘಟನೆಯ ನಂತರ, ಕರ್ತವ್ಯಲೋಪದ ಆರೋಪದ ಮೇಲೆ ಅಮೃತಸರ ಗ್ರಾಮಾಂತರ ಎಸ್‌ಎಸ್‌ಪಿ ಕನ್ವಲ್‌ಪ್ರೀತ್ ಸಿಂಗ್ ಚಾಹಲ್ ಅವರು ರಾಜಾಸನ್ಸಿ ಪೊಲೀಸ್ ಠಾಣೆಯ ಎಸ್‌ಹೆಚ್‌ಒ (ಠಾಣಾಧಿಕಾರಿ) ಇನ್ಸ್‌ಪೆಕ್ಟರ್ ಗುರುಪ್ರೀತ್ ಸಿಂಗ್ ಅವರನ್ನು ಅಮಾನತುಗೊಳಿಸಿದ್ದಾರೆ.
ಏನಿದು ಘಟನೆ?
ಸೆಪ್ಟೆಂಬರ್ 11 ರಂದು ಅಜ್ನಾಲಾದ ಭಾಲಾ ಪ್ರದೇಶದಲ್ಲಿ ಎಎಸ್‌ಐ ಜಸ್ವಂತ್ ಸಿಂಗ್ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ಅವರು ಬೈಕ್‌ನಲ್ಲಿ ತೆರಳುತ್ತಿದ್ದಾಗ, ಇಬ್ಬರು ವ್ಯಕ್ತಿಗಳು ಬೈಕ್‌ನಲ್ಲಿ ಅವರನ್ನು ಹಿಂಬಾಲಿಸಿ ತಲೆಗೆ ಗುಂಡು ಹಾರಿಸಿದ್ದರು. ಗುಂಡು ಅವರು ಧರಿಸಿದ್ದ ಪೇಟವನ್ನು ಹೊಕ್ಕು, ತಲೆಗೆ ಸಣ್ಣ ಗಾಯ ಉಂಟು ಮಾಡಿತ್ತು. ತಲೆಗೆ ಗಾಯವಾಗಿದ್ದರೂ ಧೈರ್ಯ ಪ್ರದರ್ಶಿಸಿದ ಸಿಂಗ್, ತಾವೇ ಬೈಕ್ ಚಲಾಯಿಸಿಕೊಂಡು ಪೊಲೀಸ್ ಠಾಣೆ ತಲುಪಿದ್ದರು. ಹಳೆಯ ದ್ವೇಷದಿಂದ ಈ ದಾಳಿ ನಡೆದಿದೆ ಎಂದು ಶಂಕಿಸಲಾಗಿದೆ.
ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕರಣ್‌ನನ್ನು ಬಂಧಿಸಲಾಗಿತ್ತು. ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯವು ಆತನನ್ನು ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿತ್ತು. ಪ್ರಕರಣದಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳನ್ನು ಪತ್ತೆಹಚ್ಚಲು ತನಿಖಾಧಿಕಾರಿಗಳು ಕ್ರಮಕೈಗೊಂಡಿದ್ದಾರೆ. ಇದನ್ನೂ ಓದಿ: ಜಗಳ ಬಿಡಿಸಲು ಬಂದಿದ್ದವನಿಗೆ ಚಾಕು ಇರಿತ – ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಸಾವು

