ಚೆನ್ನೈ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ ಕಾಮುಕನಿಗೆ ತಮಿಳುನಾಡಿನ (Tamil Nadu) ತೂತುಕುಡಿ (Thoothukudi) ಜಿಲ್ಲೆಯ ಪೋಕ್ಸೋ ನ್ಯಾಯಾಲಯ ( POCSO Court) ಮರಣದಂಡನೆ (Death Penalty) ಶಿಕ್ಷೆ ವಿಧಿಸಿದೆ.
ಶಿಕ್ಷೆಗೆ ಗುರಿಯಾದ ಅಪರಾಧಿಯನ್ನು ಧರ್ಮ ಮುನೀಶ್ವರನ್ ಎಂದು ಗುರುತಿಸಲಾಗಿದೆ. ಅಪರಾಧ ನಡೆದ 77 ದಿನಗಳಲ್ಲೇ ಆತನಿಗೆ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದೆ. ಲೈಂಗಿಕ ದೌರ್ಜನ್ಯ ಹಾಗೂ ಕೊಲೆ, ಎರಡೂ ಪ್ರಕರಣದಲ್ಲೂ ಆತ ಅಪರಾಧಿ ಎಂದು ಸಾಬೀತಾಗಿದ್ದು, ಪ್ರತ್ಯೇಕವಾಗಿ ಗಲ್ಲು ಶಿಕ್ಷೆ ವಿಧಿಸಲಾಗಿದೆ.
ವಿಲಾತಿಕುಲಂನ 12 ನೇ ತರಗತಿಯ 17 ವರ್ಷದ ವಿದ್ಯಾರ್ಥಿನಿ ಈ ವರ್ಷ ಮಾರ್ಚ್‌ನಲ್ಲಿ ನಾಪತ್ತೆಯಾಗಿದ್ದಳು. ಆಕೆಯ ಶವ ಮನೆಯ ಸಮೀಪವಿರುವ ಕುರುಚಲು ಪ್ರದೇಶದಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಅಪರಾಧಿಯನ್ನು ಪತ್ತೆ ಹಚ್ಚಲು ಪೊಲೀಸರು ಹರಸಾಹಸಪಟ್ಟಿದ್ದರು. ಇದನ್ನೂ ಓದಿ: ಹಳೆ ತಪ್ಪುಗಳಿಂದ ಎನ್‌ಟಿಎ ಪಾಠ ಕಲಿಯದಿರುವುದು ದುರದೃಷ್ಟಕರ: ಸುಪ್ರೀಂ ಕೋರ್ಟ್ ಆಕ್ರೋಶ

ಅಪರಾಧ ನಡೆದ ಸ್ಥಳದ ಬಳಿ ಸಿಸಿಟಿವಿ ಕ್ಯಾಮೆರಾಗಳಿಲ್ಲದ ಕಾರಣ, 10 ವಿಶೇಷ ತಂಡಗಳು ಇತರ ಸ್ಥಳಗಳಲ್ಲಿ 98 ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ಟವರ್ ಡಂಪ್ ವಿಧಾನವನ್ನು ಬಳಸಿಕೊಂಡು 2,574 ಫೋನ್ ಸಂಖ್ಯೆಗಳನ್ನು ಪರಿಶೀಲಿಸಲಾಗಿತ್ತು. ಅಪರಾಧ ನಡೆದ ಸ್ಥಳದ ಬಳಿ ಅನುಮಾನಾಸ್ಪದ ದ್ವಿಚಕ್ರ ವಾಹನದ ಫೋಟೋ ವಿಂಡ್‌ಮಿಲ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ, ಆ ಬೈಕ್‌ನ ನೋಂದಣಿ ಸಂಖ್ಯೆ ತಿರುಚಲಾಗಿದ್ದು, ಬೈಕ್ ಕದ್ದಿರುವುದು ಪತ್ತೆಯಾಗಿತ್ತು. ಇದೇ ಆಧಾರದ ಮೇಲೆ ಅಪರಾಧಿಯನ್ನು ಪೊಲೀಸರು ಪತ್ತೆಹಚ್ಚಿದ್ದರು.
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ತೂತುಕುಡಿಯ ವಿಶೇಷ ಸಾರ್ವಜನಿಕ ಅಭಿಯೋಜಕಿ ಎಲ್ಲಮ್ಮಾಳ್, ʻಈ ಪ್ರಕರಣದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರೂ ತುಂಬಾ ಜವಾಬ್ದಾರಿಯುತರಾಗಿ ಕೆಲಸ ಮಾಡಿದ್ದಾರೆ. ಆದ್ದರಿಂದ ಕಡಿಮೆ ಅವಧಿಯಲ್ಲಿ ನಮಗೆ ನ್ಯಾಯ ಸಿಕ್ಕಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ ವಿಚಾರಣೆಯನ್ನು ತ್ವರಿತಗೊಳಿಸಬೇಕು ಮತ್ತು ಸರಿಯಾದ ವಿಚಾರಣೆಯ ಮೂಲಕ ಕಠಿಣ ಶಿಕ್ಷೆಯನ್ನು ನೀಡ ಬೇಕು ಎಂದ ದಿನದಂದೇ ಈ ಆದೇಶ ಹೊರಬಿದ್ದಿದೆ. ಚುನಾವಣೆಗೂ ಮುನ್ನ ತಮ್ಮ ಪ್ರಚಾರದ ಸಮಯದಲ್ಲಿ ವಿಜಯ್, ಮಹಿಳಾ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಪ್ರಮುಖ ಪ್ರಚಾರ ವಿಷಯವನ್ನಾಗಿ ಮಾಡಿಕೊಂಡಿದ್ದರು. ಇದನ್ನೂ ಓದಿ: ಮೃತ ಮಗಳಿಗಿಂತ ವಿಚ್ಛೇದಿತ ಮಗಳು ಇರೋದೇ ಉತ್ತಮ – ತ್ವಿಶಾ ಕೇಸ್ ಸುಪ್ರೀಂನಲ್ಲಿ ಇಂದು ಏನಾಯ್ತು?
