ಬೆಂಗಳೂರು: ಶಂಕರ್ ನಾಗ್ ಅವರ ಕನಸುಗಾರಿಕೆ ಮತ್ತು ಹೊಸತೇನನ್ನೋ ಸೃಷ್ಟಿಸುವ ಹಂಬಲಕ್ಕೆ ಸ್ಪಷ್ಟ ಸಾಕ್ಷಿಯಂತಿರೋದು ಮಾಲ್ಗುಡಿ ಡೇಸ್ ಧಾರಾವಾಹಿ. ಆರ್ ಕೆ ನಾರಾಯಣ್ ಕಾದಂಬರಿ ಆಧಾರಿತವಾದ ಈ ಧಾರಾವಾಹಿಯನ್ನು ಹಿಂದಿಯಲ್ಲಿ ಶಂಕರ್ ನಾಗ್ ನಿರ್ದೇಶನ ಮಾಡಿದ್ದರು. ಈ ಮೂಲಕವೇ ಕರ್ನಾಟಕದ ನೆಲದ ಘಮಲನ್ನು ಆ ಕಾಲದಲ್ಲಿಯೇ ದೇಶೀಯ ಮಟ್ಟದಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿರುಗಿಸಿದ ಕೀರ್ತಿಯೂ ಮಾಲ್ಗುಡಿ ಡೇಸ್ ಮತ್ತು ಅದರ ಸೃಷ್ಟಿಕರ್ತ ಶಂಕರ್ ನಾಗ್ ಅವರಿಗೆ ಸಲ್ಲುತ್ತದೆ. ಈ ಧಾರಾವಾಹಿಯೀಗ ಕನ್ನಡಕ್ಕೂ ಡಬ್ ಆಗಿದೆ. ಅಮೆಜಾನ್ ಪ್ರೈಮ್‍ನಲ್ಲದು ಈಗ ನೋಡಲು ಸಿಗುತ್ತಿದೆ.
Advertisement
ಆ ಕಾಲದಲ್ಲಿಯೇ ಶಂಕರ್ ನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ದೊಡ್ಡ ಮಟ್ಟದಲ್ಲಿಯೇ ಪ್ರಸಿದ್ಧಿ ಪಡೆದುಕೊಂಡಿತ್ತು. ತದ ನಂತರದಲ್ಲಿ ಈ ಧಾರಾವಾಹಿ ಇಂಗ್ಲಿಷ್, ತಮಿಳು, ತೆಲುಗು, ಮಲೆಯಾಳಂನಂಥಾ ಭಾಷೆಗಳಿಗೂ ಡಬ್ ಆಗಿತ್ತು. ಆದರೆ ದುರದೃಷ್ಟವೆಂಬಂತೆ ಬಹು ಕಾಲದವರೆಗೂ ಇದು ಕನ್ನಡ ಭಾಷೆಗೆ ಮಾತ್ರ ಡಬ್ ಆಗಲಿಲ್ಲ. ಇದೀಗ ಆ ಕೊರಗು ನೀಗಿದೆ. ಮಾಲ್ಗುಡಿ ಡೇಸ್ ಕನ್ನಡಕ್ಕೂ ಡಬ್ ಆಗಿ ಅಮೆಜಾನ್ ಪ್ರೈಮ್‍ಗೂ ಲಗ್ಗೆಯಿಟ್ಟಿದೆ.
Advertisement
Advertisement
ಕನ್ನಡದ ಪ್ರತಿಭೆಗಳೇ ನಟಿಸಿ ನಿರ್ದೇಶನ ಮಾಡಿದ್ದ ಮಾಲ್ಗುಡಿ ಡೇಸ್ ಅನ್ನು ಕನ್ನಡಕ್ಕೆ ಡಬ್ ಮಾಡಿ ನೋಡೋ ಅವಕಾಶ ಕಲ್ಪಿಸಿಕೊಟ್ಟಿರೋದು ಬನವಾಸಿ ಬಳಗ ಎಂಬ ಕನ್ನಡದ ಸಂಸ್ಥೆ. ಕನ್ನಡಿಗರ ಕಾತರವನ್ನು ಅರ್ಥ ಮಾಡಿಕೊಂಡಿರೋ ಈ ತಂಡದ ಸದಸ್ಯರು ತುಂಬಾ ಸಮಯ ಹಗಲಿರುಳೆನ್ನದೆ ಶ್ರಮ ವಹಿಸಿ ಇದನ್ನು ಸಾಧ್ಯವಾಗಿಸಿದ್ದಾರೆ. ಆಯಾ ಪಾತ್ರಗಳಿಗೆ ತಕ್ಕುದಾದ ಧ್ವನಿಯೊಂದಿಗೆ ಶಂಕರನ ಕನಸಿನ ಕೂಸಾದ ಮಾಲ್ಗುಡಿ ಡೇಸ್ ಅನ್ನು ಕನ್ನಡಕ್ಕೆ ಡಬ್ ಮಾಡಲಾಗಿದೆ. ಈ ಮೂಲಕ ಕನ್ನಡಿಗರ ಪಾಲಿಗೆ ಮಹದಾನಂದ ನೀಡುವಂಥಾ ಕಾರ್ಯವನ್ನು ಬನವಾಸಿ ಬಳಗ ಮಾಡಿದೆ.