ಚಾಮರಾಜನಗರ: ಮಲೆ ಮಹದೇಶ್ವರ ವನ್ಯಜೀವಿ ಧಾಮದ ಪಿ.ಜಿ. ಪಾಳ್ಯ ವಲಯದಲ್ಲಿ (PG Palya Wildlife Zone) ಮದಗಜಗಳ ನಡುವಿನ ಕಾದಾಟದಲ್ಲಿ ತೀವ್ರ ಗಾಯಗೊಂಡು ಗಂಡಾನೆಯೊಂದು ಮೃತಪಟ್ಟಿರುವ ಘಟನೆ ನಡೆದಿದೆ.
ಪಿ.ಜಿ. ಪಾಳ್ಯ ವಲಯದ ಹುತ್ತೂರು ಶಾಖೆಯ ಅರಣ್ಯ ಸಿಬ್ಬಂದಿ ಮಂಗಳವಾರ ಮಧ್ಯಾಹ್ನ ಹೂಗ್ಯಂ ವಲಯ ವ್ಯಾಪ್ತಿಯ ಕೊಪ್ಪ ಗಡಿ ಭಾಗದ ಕಳ್ಳರಕೋಬೆ ಹಳ್ಳದ ಸಮೀಪ ಗಸ್ತು ತಿರುಗುತ್ತಿದ್ದ ವೇಳೆ ಈ ಕಳೇಬರ ಪತ್ತೆ ಮಾಡಿದ್ದಾರೆ. ಕೂಡಲೇ ಗಸ್ತು ಸಿಬ್ಬಂದಿ ವಲಯ ಅರಣ್ಯಾಧಿಕಾರಿ ಪುಟ್ಟರಾಜು ಅವರಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ. ಇದನ್ನೂ ಓದಿ: ಹನೂರು ತಾಲೂಕಲ್ಲಿ ಮಳೆ ಆರ್ಭಟ; ಮನೆ, ಬೃಹತ್ ಮರ, ವಿದ್ಯುತ್ ಕಂಬಗಳು ಕುಸಿತ – ಕೊಚ್ಚಿಹೋದ ಚೆಕ್ ಡ್ಯಾಂ
ಮೇಲ್ನೋಟಕ್ಕೆ ಆನೆಯ ಹೊಟ್ಟೆ, ಮುಖ ಮತ್ತು ಹಿಂಭಾಗದಲ್ಲಿ ತೀವ್ರ ಗಾಯಗಳಾಗಿರುವುದು ಕಂಡುಬಂದಿದೆ. ಸುಮಾರು 30 ರಿಂದ 35 ವರ್ಷ ವಯಸ್ಸಿನ ಗಂಡಾನೆ ಇದಾಗಿದ್ದು, ಎತ್ತರದ ಪ್ರದೇಶದಲ್ಲಿ ಮತ್ತೊಂದು ಗಂಡಾನೆಯೊಂದಿಗೆ ನಡೆದ ಕಾದಾಟದ ವೇಳೆ ಗಾಯಗೊಂಡು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಪಶುವೈದ್ಯಾಧಿಕಾರಿಗಳ ತಂಡ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಲಿದ್ದು, ಮರಣೋತ್ತರ ಪರೀಕ್ಷೆಯ ನಂತರ ನಿಖರ ಸಾವಿನ ಕಾರಣ ತಿಳಿದುಬರಲಿದೆ. ಇದನ್ನೂ ಓದಿ: ಮರ ಬಿದ್ದು ಕಾಡಾನೆ ಮರಿಗೆ ಗಂಭೀರ ಗಾಯ – ಮರಿಯಾನೆ ಎಬ್ಬಿಸಲು ತಾಯಿಯಾನೆ ಪರದಾಟ

