– ಬೆಂಗಳೂರು ಪೊಲೀಸ್ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ
– ಗ್ರೇಟರ್ ಬೆಂಗಳೂರು ಮಾದರಿಯಲ್ಲಿ ಆಯುಕ್ತರ ಹುದ್ದೆ ಸೃಷ್ಟಿಗೆ ಪ್ರಸ್ತಾಪ
ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಾರ್ವಜನಿಕ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಬೃಹತ್ ಬದಲಾವಣೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹಾಗೂ ಐದು ಮಹಾನಗರ ಪಾಲಿಕೆಗಳ ರಚನೆಯ ಮಾದರಿಯಲ್ಲೇ, ನಗರದಲ್ಲಿ ಐದು ಹೊಸ ಪೊಲೀಸ್ ಆಯುಕ್ತರ (Police Commissioner) ಹುದ್ದೆಗಳನ್ನು ಸೃಷ್ಟಿಸಲು ಅಧಿಕೃತ ಪ್ರಸ್ತಾವನೆ ಸಿದ್ಧಗೊಂಡಿದೆ.
ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಈ ವಿಸ್ತೃತ ವಿಭಜನಾ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಈ ನೂತನ ಯೋಜನೆ ಪ್ರಕಾರ ಮುಖ್ಯ ಆಯುಕ್ತರ (Chief Commissioner) ಸುಪರ್ದಿಯಲ್ಲಿ ಹೊಸದಾಗಿ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಹಾಗೂ ಕೇಂದ್ರ ಎಂಬ ಐದು ವಿಭಾಗಗಳನ್ನು ರೂಪಿಸಲಾಗುತ್ತದೆ.
ಪ್ರತಿಯೊಂದು ವಿಭಾಗಕ್ಕೂ ಪ್ರತ್ಯೇಕ ಆಯುಕ್ತರನ್ನು ನೇಮಕ ಮಾಡಲು ನಿರ್ಧರಿಸಲಾಗಿದೆ. ನಗರದ ಗಡಿ ವಿಸ್ತರಣೆಯ ಭಾಗವಾಗಿ ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯ ಕೆಲವು ಪ್ರಮುಖ ಪ್ರದೇಶಗಳು ಸಹ ಬೆಂಗಳೂರು ಸಿಟಿ ಪೊಲೀಸ್ ವ್ಯಾಪ್ತಿಗೆ ಒಳಪಡಲಿವೆ.
ಈ ಬೃಹತ್ ಆಡಳಿತಾತ್ಮಕ ಬದಲಾವಣೆಯನ್ನು ಕಾರ್ಯರೂಪಕ್ಕೆ ತರಲು ಸುಮಾರು 7,648 ಕೋಟಿ ರೂ.ಅನುದಾನ ಅಗತ್ಯವಾಗಿದ್ದು ಕಾರ್ಯಪಡೆ ಹೆಚ್ಚಿಸಲು 6,633 ನೂತನ ಹುದ್ದೆಗಳ ಸೃಜನೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಜಿಬಿಎ (GBA) ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಅದೇ ಮಾದರಿಯಲ್ಲಿ ಪೊಲೀಸ್ ಇಲಾಖೆಯನ್ನು ವಿಭಜಿಸುವ ಕುರಿತು ಕಳೆದ ಒಂದು ವರ್ಷದಿಂದ ಚರ್ಚೆಗಳು ನಡೆಯುತ್ತಿದ್ದವು. ಪ್ರಸ್ತುತ ಈ ಯೋಜನೆಗೆ ಈಗ ಲಿಖಿತ ರೂಪ ಸಿಕ್ಕಿದೆ.
ಈ ಪ್ರಸ್ತಾವನೆಯ ಸಾಧಕ-ಬಾಧಕಗಳ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ವಿಸ್ತೃತ ಸಮಾಲೋಚನೆ ನಡೆಸಿದ ನಂತರ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಇದನ್ನೂ ಓದಿ: ಸಚಿವ ಸ್ಥಾನ ವಂಚಿತ ನಾಯಕರ ಆಕ್ರೋಶ – 15ಕ್ಕೂ ಹೆಚ್ಚು ಶಾಸಕರಿಗೆ ಅಸಮಾಧಾನ

ಯಾವ ವಲಯಕ್ಕೆ ಯಾವುದು ಸೇರ್ಪಡೆ?
ಕಮಿಷನರ್ ಸೆಂಟ್ರಲ್
* ಡಿಸಿಪಿ ಸೆಂಟ್ರಲ್
* ಡಿಸಿಪಿ ಇಂದಿರಾನಗರ
* ಡಿಸಿಪಿ ಗಾಂಧಿನಗರ
* ಡಿಸಿಪಿ ಸೆಂಟ್ರಲ್ ಟ್ರಾಫಿಕ್
* ಡಿಸಿಪಿ ಹೆಡ್ ಕ್ವಾರ್ಟರ್ಸ್
* ಡಿಸಿಪಿ ಸಿಎಆರ್ ಸೆಂಟ್ರಲ್
ಕಮಿಷನರ್ ಈಸ್ಟ್
* ಡಿಸಿಪಿ ಈಸ್ಟ್
* ಡಿಸಿಪಿ ವೈಟ್ ಫೀಲ್ಡ್
* ಡಿಸಿಪಿ ಈಸ್ಟ್ ಟ್ರಾಫಿಕ್
* ಡಿಸಿಪಿ ಸಿಎಆರ್ ಈಸ್ಟ್
* ಡಿಸಿಪಿ ಹೆಡ್ ಕ್ವಾರ್ಟರ್ಸ್
ಕಮಿಷನರ್ ವೆಸ್ಟ್
* ಡಿಸಿಪಿ ವೆಸ್ಟ್
* ಡಿಸಿಪಿ ಕೆಂಗೇರಿ
* ಡಿಸಿಪಿ ಪೀಣ್ಯ
* ಡಿಸಿಪಿ ವೆಸ್ಟ್ ಟ್ರಾಫಿಕ್
* ಡಿಸಿಪಿ ಸಿಎಆರ್ ವೆಸ್ಟ್
* ಡಿಸಿಪಿ ಹೆಡ್ ಕ್ವಾರ್ಟರ್ಸ್
ಕಮಿಷನರ್ ನಾರ್ಥ್
* ಡಿಸಿಪಿ ನಾರ್ಥ್
* ಡಿಸಿಪಿ ನಾರ್ಥ್ ಈಸ್ಟ್
* ಡಿಸಿಪಿ ಯಶವಂತಪುರ
* ಡಿಸಿಪಿ ನಾರ್ಥ್ ಟ್ರಾಫಿಕ್
* ಡಿಸಿಪಿ ಹೆಡ್ ಕ್ವಾರ್ಟರ್ಸ್
* ಡಿಸಿಪಿ ಸಿಎಆರ್
ಕಮಿಷನರ್ ಸೌತ್
* ಡಿಸಿಪಿ ಸೌತ್
* ಡಿಸಿಪಿ ಸೌತ್ ಈಸ್ಟ್
* ಡಿಸಿಪಿ ಎಲೆಕ್ಟ್ರಾನಿಕ್ ಸಿಟಿ
* ಡಿಸಿಪಿ ಸೌತ್ ಟ್ರಾಫಿಕ್
* ಡಿಸಿಪಿ ಸಿಎಆರ್ ಸೌತ್
* ಡಿಸಿಪಿ ಹೆಡ್ ಕ್ವಾರ್ಟರ್ಸ್
