Connect with us

Latest

ಸ್ವರ್ಣ ಶತಾಬ್ದಿ ಎಕ್ಸ್ ಪ್ರೆಸ್ ರೈಲಿನ ಮಾಲೀಕನಾದ ಪಂಜಾಬಿನ ರೈತ!

Published

on

ಲುಧಿಯಾನಾ: 45 ವರ್ಷದ ವ್ಯಕ್ತಿಯೊಬ್ಬರು ಪರಿಹಾರ ಹಣ ಪಡೆಯುವುದಕ್ಕಾಗಿ ಕೋರ್ಟ್ ಮೆಟ್ಟಿಲೇರಿ ಕೊನೆಗೆ ರೈಲಿನ ಮಾಲಿಕತ್ವವನ್ನೇ ಪಡೆದ ಅಪರೂಪದ ಘಟನೆ ಲುಧಿಯಾನಾದಲ್ಲಿ ನಡೆದಿದೆ.

ಲುಧಿಯಾನಾದ ಕಟಾನಾ ಗ್ರಾಮದ ನಿವಾಸಿಯಾದ ಸಂಪೂರಣ್ ಸಿಂಗ್ ಅಮೃತಸರ – ನವದೆಹಲಿಯ ನಡುವೆ ಓಡಾಡುವ ಸ್ವರ್ಣ ಶತಾಬ್ದಿ ಎಕ್ಸ್ ಪ್ರೆಸ್‍ನ ಒಡೆಯರಾಗಿದ್ದಾರೆ. 2015ರಲ್ಲಿ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನೀಡಿದ ಆದೇಶದಂತೆ ಉತ್ತರ ರೈಲ್ವೆಯವರು ಸಂಪೂರಣ್ ಸಿಂಗ್ ಅವರಿಗೆ ಜಮೀನಿನ ಹೆಚ್ಚುವರಿ ಪರಿಹಾರ ಹಣ ನೀಡಿರಲಿಲ್ಲ. ಈ ಕಾರಣಕ್ಕಾಗಿ ನ್ಯಾಯಾಧೀಶರಾದ ಜಸ್ಪಾಲ್ ವರ್ಮಾ 12030 ನಂಬರಿನ ರೈಲನ್ನ ಸಂಪೂರಣ್ ಸಿಂಗ್ ಅವರ ಹೆಸರಿಗೆ ಮಾಡಿದ್ದು ತಾಂತ್ರಿಕವಾಗಿ ರೈಲನ್ನ ಸಂತ್ರಸ್ತ ರೈತನಿಗೆ ನೀಡಿದ್ದಾರೆ. ಅಲ್ಲದೆ ಉತ್ತರ ರೈಲ್ವೆಯ ಸ್ಟೇಷನ್ ಮಾಸ್ಟರ್ ಕಚೇರಿಯನ್ನೂ ಕೂಡ ಸಂಪೂರಣ್ ಸಿಂಗ್ ಅವರ ಹೆಸರಿಗೆ ಮಾಡಿದ್ದಾರೆ. ಇದರ ಫಲವಾಗಿ ರೈಲು ಈಗ ಸಂಪೂರಣ್ ಸಿಂಗ್ ಅವರ ಆಸ್ತಿಯಾಗಿದೆ. (ಕಾನೂನು ಪ್ರಕ್ರಿಯೆ ಪ್ರಕಾರ ವ್ಯಕ್ತಿಯೊಬ್ಬ ಸಾಲ ತೀರಿಸಲು ಸಾಧ್ಯವಾಗದಿದ್ದಾಗ ನ್ಯಾಯಾಲಯವು ಸಾಲ ನೀಡಿದವರ ಮನವಿಯಂತೆ ಸಾಲ ಪಡೆದವನ ಕೆಲವು ನಿರ್ದಿಷ್ಟ ಆಸ್ತಿಯನ್ನು ಸಾಲ ನೀಡಿದವನ ಹೆಸರಿಗೆ ವರ್ಗಾಯಿಸುವಂತೆ ನಿಯೋಜಿಸುತ್ತದೆ)

ಏನಿದು ಪ್ರಕರಣ: 2007ರಲ್ಲಿ ಲುಧಿಯಾನಾ ಚಂಡೀಘಢ ರೈಲ್ವೆ ಲೈನ್‍ಗಾಗಿ ರೈತರ ಜಮೀನನ್ನು ಉತ್ತರ ರೈಲ್ವೆ ಸ್ವಾಧೀನಕ್ಕೆ ತೆಗೆದುಕೊಂಡಿತ್ತು. ನಂತರ ಕೋರ್ಟ್ ಎಕರೆಗೆ 25 ಲಕ್ಷ ರೂ. ಇದ್ದ ಪರಿಹಾರವನ್ನು 50 ಲಕ್ಷ ರೂ.ಗೆ ಹೆಚ್ಚಳ ಮಾಡಿತ್ತು. ಹೀಗಾಗಿ ಸಂಪೂರಣ್ ಸಿಂಗ್ ಅವರಿಗೆ ಒಟ್ಟು 1.47 ಕೋಟಿ ರೂ. ಪರಿಹಾರ ಹಣ ಸಿಗಬೇಕಿತ್ತು. ಆದ್ರೆ ರೈಲ್ವೆಯವರು ಕೊಟ್ಟಿದ್ದು ಮಾತ್ರ 42 ಲಕ್ಷ ರೂ. ಹೀಗಾಗಿ ಹೆಚ್ಚುವರಿ ಪರಿಹಾರ ಹಣಕ್ಕಾಗಿ 2012ರಲ್ಲಿ ಸಂಪೂರಣ್ ಸಿಂಗ್ ಅರ್ಜಿ ಸಲ್ಲಿಸಿದ್ದರು. ಜನವರಿ 2015ರಲ್ಲಿ ರೈತನಿಗೆ ಬಾಕಿ ನೀಡಬೇಕಿರುವ ಪರಿಹಾರ ಹಣ ನೀಡುವಂತೆ ಕೋರ್ಟ್ ಉತ್ತರ ರೈಲ್ವೆಗೆ ಆದೇಶ ನೀಡಿತ್ತು. ಆದ್ರೆ ರೈಲ್ವೆಯವರು ಹಣ ನೀಡದ ಹಿನ್ನೆಲೆಯಲ್ಲಿ ಆದೇಶವನ್ನು ಅನುಷ್ಠಾನಗೊಳಿಸುವಂತೆ ಕೋರಿ ಸಂಪೂರಣ್ ಸಿಂಗ್ ಮತ್ತೆ ಮನವಿ ಸಲ್ಲಿಸಿದ್ದರು.

ಸಂಪೂರಣ್ ಸಿಂಗ್ ರೈಲನ್ನು ಏನು ಮಾಡಿದ್ರು?: ಸ್ವರ್ಣ ಶತಾಬ್ದಿ ಎಕ್ಸ್ ಪ್ರೆಸ್ ರೈಲು ನಿಲ್ದಾಣಕ್ಕೆ ಬಂದು ತಲುಪುವುದಕ್ಕೆ 1 ಗಂಟೆ ಮುಂಚೆ ಸಂಪೂರಣ್ ಸಿಂಗ್ ಮತ್ತು ಅವರ ವಕೀಲರಾದ ರಾಕೇಶ್ ಗಾಂಧಿ ನಿಲ್ದಾಣಕ್ಕೆ ಹೋಗಿದ್ದರು. ನಂತರ ರೈಲು ಚಾಲಕನಿಗೆ ಕೋರ್ಟ್ ಆದೇಶ ಪ್ರತಿಯನ್ನು ತೋರಿಸಿದ್ರು. ನಂತರ ಸೆಕ್ಷನ್ ಎಂಜಿನಿಯರ್ ಪ್ರದೀಪ್ ಕುಮರ್ ರೈಲನ್ನು ನ್ಯಾಯಾಲಯದ ಅಧಿಕಾರಿಯ ಸಮ್ಮುಖದಲ್ಲಿ ಬಿಟ್ಟುಕೊಟ್ಟಿದ್ದು, ಈ ಮೂಲಕ ಸದ್ಯಕ್ಕೆ ರೈಲು ನ್ಯಾಯಾಲಯದ ಆಸ್ತಿಯಾಗಿದೆ.

ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ನಾವು ರೈಲಿನ ಪ್ರಯಾಣವನ್ನು ನಿಲ್ಲಿಸಲಿಲ್ಲ ಎಂದು ಸಂಪೂರಣ್ ಸಿಂಗ್ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದಾರೆ.

ರೈಲನ್ನ ಮನೆಗೆ ತೆಗೆದುಕೊಂಡು ಹೋಗೋಕಾಗುತ್ತಾ?: ಕೋರ್ಟ್ ಆದೇಶದ ಬಗ್ಗೆ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿರೋ ವಿಭಾಗೀಯ ರೈಲ್ವೆ ಮ್ಯಾನೇಜರ್ ಅನುಜ್ ಪರ್ಕಾಶ್, ರೈತನಿಗೆ ನೀಡಬೇಕಿರುವ ಪರಿಹಾರ ಹಣದ ವಿಚಾರವಾಗಿ ಏನೋ ಸಮಸ್ಯೆಯಾಗಿದ್ದು, ಅದನ್ನು ಪರಿಶೀಲಿಸಲಾಗುತ್ತಿದೆ ಎಂದಿದ್ದಾರೆ. ಅಲ್ಲದೆ ಇಂತಹ ಆದೇಶಗಳನ್ನು ಕಾನೂನು ಇಲಾಖೆ ಪರಿಶೀಲಿಸುತ್ತದೆ. ಅರ್ಜಿದಾರ 300 ಮೀಟರ್ ಉದ್ದದ ರೈಲನ್ನು ತೆಗೆದುಕೊಂಡು ಏನು ಮಾಡ್ತಾರೆ? ಅದನ್ನು ಮನೆಗೆ ತೆಗೆದುಕೊಂಡು ಹೋಗೋಕಾಗುತ್ತಾ? ಎಂದು ಪ್ರಶ್ನಿಸಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in