ಚಂಡೀಗಢ: ಇಲ್ಲಿನ ಮಹಾರಾಜ ಯಾದವೀಂದ್ರ ಸಿಂಗ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ (IPL 2026) ಪಂದ್ಯದಲ್ಲಿ ಲಕ್ನೋ (LSG) ವಿರುದ್ಧ ಪಂಜಾಬ್ (PBKS) 54 ರನ್‌ಗಳ ಭರ್ಜರಿ ಜಯಗಳಿಸಿ ತನ್ನ ಅಜೇಯ ಓಟವನ್ನು ಮುಂದುವರಿಸಿದೆ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ಪ್ರಿಯಾಂಶ್, ಕೊನೊಲಿ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಲಕ್ನೋಗೆ 255 ರನ್‌ಗಳ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಲಕ್ನೋ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 200 ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು.
ಲಕ್ನೋ ಪರ ಕಣಕ್ಕಿಳಿದ ಆಯುಷ್ ಬಡೋನಿ 21 ಎಸೆತಗಳಲ್ಲಿ 1 ಸಿಕ್ಸರ್ 5 ಬೌಂಡರಿ ಸಿಡಿಸಿ 35 ರನ್‌ಗಳಿಸಿ ವಿಜಯ್‌ಕುಮಾರ್ ವೈಶಾಕ್‌ಗೆ ವಿಕೆಟ್ ಒಪ್ಪಿಸಿದರು. ಮಿಚೆಲ್ ಮಾರ್ಷ್ 28 ಎಸೆತಗಳಲ್ಲಿ 40 ರನ್ ಗಳಿಸಿ, ಯುಜ್ವೇಂದ್ರ ಚಾಹಲ್ ಎಸೆತದಲ್ಲಿ ಕ್ಯಾಚ್ ನೀಡಿದರು. ಈ ಮೂಲಕ ಎರಡನೇ ವಿಕೆಟ್ 109 ರನ್‌ಗಳಿಗೆ ಪತನವಾಯಿತು.

ತಂಡದ ನಾಯಕ ರಿಷಬ್ ಪಂತ್ 23 ಎಸೆತಗಳಲ್ಲಿ 4 ಸಿಕ್ಸರ್ 1 ಬೌಂಡರಿ ಸಿಡಿಸಿ 43 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಅಂತಿಮವಾಗಿ ಏಡೆನ್ ಮಾರ್ಕ್ರಾಮ್ 42 ರನ್ ಗಳಿಸಿ ಔಟಾದರು. ಮುಕುಲ್ ಚೌಧರಿ 21 ರನ್ ಗಳಿಸಿ ಔಟಾಗದೆ ಉಳಿದರು.
ಅಬ್ಬರದ ಆಟ:
ಹಾಗೆ ನೋಡಿದರೆ ಪಂಜಾಬ್ ಮೊತ್ತ 3 ರನ್ ಆಗಿದ್ದಾಗ ಪ್ರಭುಸಿಮ್ರಾನ್ ಸಿಂಗ್ ಸೊನ್ನೆಗೆ ಔಟಾಗಿದ್ದರು. ಆದರೆ ಎರಡನೇ ವಿಕೆಟಿಗೆ ಪ್ರಿಯಾಂಶ್ ಆರ್ಯ ಮತ್ತು ಕೊನೊಲಿ ಕೇವಲ 80 ಎಸೆತಗಳಲ್ಲಿ 182 ರನ್ ಜೊತೆಯಾಟವಾಡಿದರು.
ಪಂಜಾಬ್ ಕಿಂಗ್ಸ್ 12 ಓವರ್ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತ್ತು. ರನ್ ಓಟಕ್ಕೆ ಕಡಿವಾಣ ಹಾಕಲು ರಿಷಭ್ ಪಂತ್ 13ನೇ ಓವರ್ ಎಸೆಯಲು ಮಾರ್ಕ್ರಾಮ್ ಕೈಗೆ ಬಾಲ್ ನೀಡಿದರು.
8ನೇ ಬೌಲರ್ ಆಗಿ ಮಾರ್ಕ್ರಾಮ್ (Aiden Markram) ಎಸೆದ ಮೊದಲ ಮೂರು ಎಸೆತವನ್ನು ಕೊನೊಲಿ(Cooper Connolly) ಸಿಕ್ಸ್‌ಗೆ ಅಟ್ಟಿದರು. ನಾಲ್ಕನೇಯ ಎಸೆತ ವೈಡ್ ಆಗಿತ್ತು. ಮರು ಎಸೆತದಲ್ಲಿ ಒಂಟಿ ರನ್ ಓಡಿದ್ದರಿಂದ ಸ್ಟ್ರೈಕ್‌ಗೆ ಪ್ರಿಯಾಂಶ್ ಆರ್ಯ(Priyansh Arya) ಬಂದರು. ಆರ್ಯ ಬಂದವರೇ ಕೊನೆಯ ಎರಡು ಎಸೆತದಲ್ಲಿ ಸಿಕ್ಸ್ ಸಿಡಿಸಿದರು. 5 ಸಿಕ್ಸ್, 1 ವೈಡ್, 1 ರನ್ ನಿಂದಾಗಿ ಈ ಓವರ್‌ನಲ್ಲಿ 32 ರನ್ ಬಂದಿತ್ತು. ದುಬಾರಿ ರನ್ ನೀಡಿದ ಬಳಿಕ ಮತ್ತೆ ಮಾರ್ಕ್ರಾಮ್ ಬೌಲಿಂಗ್ ಮಾಡಲಿಲ್ಲ.
ಪ್ರಿಯಾಂಶ್ ಅರ್ಯಾ 93 ರನ್(37 ಎಸೆತ, 4 ಬೌಂಡರಿ, 9 ಸಿಕ್ಸ್), ಕೂಪರ್ ಕೊನೊಲಿ 87 ರನ್(46 ಎಸೆತ, 8 ಬೌಂಡರಿ, 7 ಸಿಕ್ಸ್) ಹೊಡೆದು ಔಟಾದರೆ ಕೊನೆಯಲ್ಲಿ ಸ್ಟೋಯಿನಿಸ್ 29 ರನ್(16 ಎಸೆತ, 2 ಬೌಂಡರಿ, 2 ಸಿಕ್ಸ್) ಶಶಾಂಕ್ ಸಿಂಗ್ 17 ರನ್(6 ಬೌಂಡರಿ, 1 ಬೌಂಡರಿ, 2 ಸಿಕ್ಸ್) ಹೊಡೆದು ಔಟಾದರು. ಬ್ಯಾಟರ್‌ಗಳ ಸ್ಫೋಟಕ ಆಟದಿಂದ ಪಂಜಾಬ್ 7 ವಿಕೆಟ್ ನಷ್ಟಕ್ಕೆ 254 ರನ್ ಗಳಿಸಿತು.

