ಟೆಹ್ರಾನ್: ಅಮೆರಿಕದೊಂದಿಗೆ (USA) ಏಪ್ರಿಲ್ 20 ರಂದು (ಸೋಮವಾರ) ಪಾಕಿಸ್ತಾನದ (Pakistan) ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದ್ದ ಎರಡನೇ ಸುತ್ತಿನ ಶಾಂತಿ ಮಾತುಕತೆಯನ್ನು ನಡೆಸಲು ಇರಾನ್(Iran) ಅಧಿಕೃತವಾಗಿ ನಿರಾಕರಿಸಿದೆ.
ಅಮೆರಿಕ ಅತಿಯಾದ ಬೇಡಿಕೆಗಳು, ಅಪ್ರಾಯೋಗಿಕ ನಿರೀಕ್ಷೆಗಳು ಮತ್ತು ಪದೇ ಪದೇ ಬದಲಾಗುತ್ತಿರುವ ನಿಲುವುಗಳಿಂದಾಗಿ ಮಾತುಕತೆಯಿಂದ ಹಿಂದೆ ಸರಿಯುತ್ತಿರುವುದಾಗಿ ಇರಾನ್ ತಿಳಿಸಿದೆ.
ಭಾನುವಾರ ನಡೆದ ಉನ್ನತ ಮಟ್ಟದ ಸಭೆಯ ಬಳಿಕ ಇರಾನ್‌ನ ಮೊದಲ ಉಪಾಧ್ಯಕ್ಷ ಮೊಹಮ್ಮದ್ ರೆಜಾ ಅರೆಫ್ ಅಮೆರಿಕದ ಶಾಂತಿ ಮಾತುಕತೆಯನ್ನು ಟೀಕಿಸಿದ್ದಾರೆ. ಅಮೆರಿಕದ ನಿಲುವುಗಳು ಬಾಲಿಶ ಮತ್ತು ಅಸಮಂಜಸವಾಗಿವೆ. ಒತ್ತಡದಲ್ಲಿ ಕದನ ವಿರಾಮ ಮತ್ತು ಮಾತುಕತೆಗಳನ್ನು ಬಯಸುವುದು, ನಂತರ ಕಠಿಣ ಷರತ್ತನ್ನು ಹೇರುವುದು ಎಂದು ದೂರಿದ್ದಾರೆ.
ಸಮುದ್ರ ಮಾರ್ಗದಲ್ಲಿ ಅಮೆರಿಕ ಮುಂದುವರಿಸಿರುವ ದಿಗ್ಬಂಧನವು ಪ್ರಸ್ತುತ ಇರುವ ಕದನ ವಿರಾಮದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಇರಾನ್ ಆರೋಪಿಸಿದೆ. ಇದನ್ನೂ ಓದಿ: ಮತ್ತೆ ಪಾಕ್‌ನಲ್ಲಿ ಮಾತುಕತೆ – ಈ ಬಾರಿ ವಿಫಲವಾದರೆ ಇರಾನ್ ನಾಶ್: ಟ್ರಂಪ್ ಎಚ್ಚರಿಕೆ
ಮಾತುಕತೆಗೆ ನಕಾರ ಸೂಚಿಸಿರುವ ಬೆನ್ನಲ್ಲೇ ಇರಾನ್ ಹಾರ್ಮುಜ್ ಜಲಸಂಧಿಯ (Strait of Hormuz) ಮೇಲೆ ತನ್ನ ನಿಯಂತ್ರಣವನ್ನು ಇರಾನ್ ಮತ್ತಷ್ಟು ಬಿಗಿಗೊಳಿಸಿದ್ದು ಇದು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಆತಂಕ ಮೂಡಿಸಿದೆ.
ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಅಮೆರಿಕ ಅಧಿಕಾರಿಗಳೊಂದಿಗೆ ಸಂಧಾನ ನಡೆಸುವ ಪ್ರಯತ್ನಗಳು ನಡೆದಿದ್ದರೂ, ಇರಾನ್ ತನ್ನ ತಂಡವನ್ನು ಕಳುಹಿಸಲು ಸಿದ್ಧವಿಲ್ಲ ಎಂದು ಸ್ಪಷ್ಟಪಡಿಸಿದೆ.
ಇರಾನ್ ನಿರಾಕರಿಸಿದ್ದು ಯಾಕೆ?
ಇರಾನ್ ಅಣು ಬಾಂಬ್ ತಯಾರಿಸುವುದನ್ನು ನಿಲ್ಲಿಸಬೇಕು ಮತ್ತು ತನ್ನ ಬಳಿ ಇರುವ ಯುರೇನಿಯಂ ದಾಸ್ತಾನುಗಳನ್ನು ಅಮೆರಿಕಾಕ್ಕೆ ಹಸ್ತಾಂತರಿಸಬೇಕು ಎಂಬುದು ಅಮೆರಿಕಾದ ಕಠಿಣ ಷರತ್ತು ವಿಧಿಸಿತ್ತು. ಆದರೆ ಇರಾನ್ ತನ್ನ ಯುರೇನಿಯಂ ಪುಷ್ಟೀಕರಣದ ಹಕ್ಕನ್ನು ಬಿಟ್ಟುಕೊಡಲು ನಿರಾಕರಿಸಿದೆ.
ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮೇಲೆ ಹೆಚ್ಚಿನ ಅಧಿಕಾರ ಬೇಕೆಂದು ಇರಾನ್ ಒತ್ತಾಯಿಸಿತ್ತು. ಪ್ರತಿಯಾಗಿ ಅಮೆರಿಕವು ಈ ಮಾರ್ಗದಲ್ಲಿ ಮುಕ್ತ ಸಂಚಾರಕ್ಕೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದಿತ್ತು
ಮಾತುಕತೆಯ ವೇಳೆ ಅಮೆರಿಕ ತನ್ನ ನಿಲುವುಗಳನ್ನು ಪದೇ ಪದೇ ಬದಲಿಸುತ್ತಿದೆ ಮತ್ತು ಹೊಸ ಬೇಡಿಕೆಗಳನ್ನು ಮುಂದಿಡುತ್ತಿದೆ ಎಂದು ಇರಾನ್ ಆರೋಪಿಸಿದೆ.
ಇರಾನ್ ತನ್ನ ಬಂದರುಗಳ ಮೇಲಿನ ದಿಗ್ಬಂಧನವನ್ನು ತೆರವುಗೊಳಿಸುವವರೆಗೆ ಹೊರ್ಮುಜ್ ಜಲಸಂಧಿಯನ್ನು ಮುಚ್ಚಿಡುವುದಾಗಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ (IRGC) ಪ್ರಕಟಿಸಿದೆ.

