ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ (Dharmendra Pradhan) ರಾಜೀನಾಮೆ ನೀಡಿದ ಬೆನ್ನಲ್ಲೇ ಕಾಕ್ರೋಚ್ ಜನತಾ ಪಾರ್ಟಿ (Cockroach Janta Party) ವಿಜಯೋತ್ಸವ ಆಚರಿಸಿದೆ. ʼವಿದ್ಯಾರ್ಥಿಗಳ ಶಕ್ತಿ ಚಿರಾಯುವಾಗಲಿʼ ಎಂದು ಸಿಜೆಪಿ ಪೋಸ್ಟ್ ಹಂಚಿಕೊಂಡಿದೆ.
ಹೊಸದಾಗಿ ರೂಪುಗೊಂಡ ವಿಡಂಬನಾತ್ಮಕ ರಾಜಕೀಯ ಗುಂಪಾದ ಸಿಜೆಪಿಯ ಸದಸ್ಯರು, ರಾಷ್ಟ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್-ಯುಜಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆದ ಅಕ್ರಮಗಳಿಗೆ ಸಂಬಂಧಿಸಿದಂತೆ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಿತು. ಜೂನ್‌ನಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಧರಣಿ ನಡೆಸಿದರು. ಇದನ್ನೂ ಓದಿ: ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ – ಯುವಸಮೂಹಕ್ಕೆ ಅತಿದೊಡ್ಡ ಗೆಲುವು, ಮಂಡಿಯೂರಿದ ಕೇಂದ್ರ
ಸಿಜೆಪಿ ಮತ್ತು ಕೇಂದ್ರದ ನಡುವಿನ ಮೂರನೇ ಸುತ್ತಿನ ಮಾತುಕತೆ ಹೊತ್ತಿನಲ್ಲೇ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಪ್ರಧಾನ್ ರಾಜೀನಾಮೆ ಘೋಷಿಸಿದ್ದಾರೆ.
ಮೊದಲ ದಿನದಿಂದಲೇ, ನಾನು ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡೆ. ಪರಿಸ್ಥಿತಿಯಿಂದ ಎಂದಿಗೂ ಹಿಂದೆ ಸರಿಯಲಿಲ್ಲ. ‘ಪರೀಕ್ಷಾ ಮಾಫಿಯಾ’ದಿಂದ ಯಾವುದೇ ಪ್ರತಿಭಾನ್ವಿತ ವಿದ್ಯಾರ್ಥಿಯ ಸಾಮರ್ಥ್ಯ ಹಾಳಾಗಬಾರದು. ಯಾವುದೇ ವಿದ್ಯಾರ್ಥಿಗೆ ಯಾವುದೇ ಅನ್ಯಾಯವಾಗಬಾರದು ಎಂದು ನಾನು ದೃಢನಿಶ್ಚಯ ಮಾಡಿದ್ದೆ ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನಮ್ಮ ಪ್ರಜಾಪ್ರಭುತ್ವದ ಬಲದಲ್ಲಿ ನಾನು ಯಾವಾಗಲೂ ಅಚಲ ನಂಬಿಕೆಯನ್ನು ಹೊಂದಿದ್ದೇನೆ. ಯುವಕರ ಆಕಾಂಕ್ಷೆಗಳು, ಕನಸುಗಳು ಮತ್ತು ನಿರೀಕ್ಷೆಗಳನ್ನು ಗೌರವಿಸುತ್ತೇನೆ. ಅವರು ಕೇವಲ ಭಾರತದ ಭವಿಷ್ಯದಲ್ಲ. ಅವರು ಹೊಸ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಜ್ಯೋತಿ ಧಾರಕರು, ಸೃಷ್ಟಿಕರ್ತರು ಮತ್ತು ವಾಸ್ತುಶಿಲ್ಪಿಗಳು. ಘಟನೆಯಿಂದಾಗಿ ಕಳೆದ ಹತ್ತು ದಿನಗಳಿಂದ ಮನಸ್ಸಿಗೆ ತುಂಬಾ ನೋವಾಗಿದೆ. ಇದು ನನಗೆ ವೈಯಕ್ತಿಕ ಪ್ರತಿಷ್ಠೆಯ ವಿಷಯವಲ್ಲ ಎಂದು ಸಚಿವರು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿ ನೀಟ್ ಪ್ರತಿಭಟನೆಯಲ್ಲಿದ್ದಾರಾ ಕ್ರಿಮಿನಲ್ಸ್? – ಅಪರಾಧ ಹಿನ್ನೆಲೆಯುಳ್ಳ 2,500 ಮಂದಿ ಭಾಗಿ
2026ರ ಮೇ 3 ರಂದು ನೀಟ್ ಪರೀಕ್ಷೆ ನಡೆದಿತ್ತು. ಆದರೆ, ಪತ್ರಿಕೆ ಸೋರಿಕೆಯಿಂದಾಗಿ ಜೂನ್ 21 ಕ್ಕೆ ಮರು ನಿಗದಿಪಡಿಸಲಾಗಿತ್ತು.
