ಬಾಗಲಕೋಟೆ: ಜಿಲ್ಲೆಯ ಅಮೀನಗಡ ಪಟ್ಟಣ ಪಂಚಾಯತ್(Aminagad Town Panchayat) ಕಚೇರಿಯಲ್ಲಿ ನಡೆಯುತ್ತಿದ್ದ ಸಾಲು ಸಾಲು ಭ್ರಷ್ಟಾಚಾರ ಮತ್ತು ಅಕ್ರಮಗಳ ದೂರುಗಳಿಗೆ ಸಂಬಂಧಿಸಿದಂತೆ, ಕರ್ನಾಟಕ ಲೋಕಾಯುಕ್ತ ಪೊಲೀಸರು(Lokayukta Police) ದಿಢೀರ್ ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡಿದ್ದಾರೆ.
ಅಮೀನಗಡ ಪಟ್ಟಣ ಪಂಚಾಯತ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಾರ್ವಜನಿಕರಿಗೆ ಈ-ಸ್ವತ್ತು, ಎನ್‌ಒಸಿ (NOC) ಹಾಗೂ ಕಟ್ಟಡ ಕಟ್ಟಲು ಅನುಮತಿ ನೀಡುವಲ್ಲಿ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂಬ ಆರೋಪಗಳಿದ್ದವು.
ನಿಯಮಗಳನ್ನು ಉಲ್ಲಂಘಿಸಿ ವಾಣಿಜ್ಯ ಉದ್ದೇಶಕ್ಕಾಗಿ ಇ-ಖಾತಾ ಮತ್ತು ನಕಲಿ ಹಕ್ಕುಪತ್ರಗಳನ್ನು ಸೃಷ್ಟಿಸಿ ನೀಡುವುದು, ಲೇಔಟ್ ಅಭಿವೃದ್ಧಿ ಪಡಿಸದೇ ಇದ್ದರೂ ನಿಯಮಬಾಹಿರವಾಗಿ ದಾಖಲಿಸಿಕೊಂಡಿರುವುದು. ಸಾಮಾನ್ಯ ನಿಧಿ, ಅಂಗನವಾಡಿ ಅಭಿವೃದ್ಧಿ ಹಾಗೂ ಕಂಪ್ಯೂಟರ್ ಖರೀದಿ ಹಣದಲ್ಲಿ ಅಕ್ರಮ ಎಸಗಿರುವುದು. ಹೀಗೆ ಅನೇಕ ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಇದನ್ನೂ ಓದಿ: ಮೊಬೈಲ್ ಬಳಸಬೇಡ ಎಂದು ತಾಯಿ ಬುದ್ಧಿವಾದ – ವಿದ್ಯಾರ್ಥಿನಿ ಆತ್ಮಹತ್ಯೆ
ಲೋಕಾಯುಕ್ತರ ನಿರ್ದೇಶನದಂತೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದ ಲೋಕಾಯುಕ್ತ ಅಧಿಕಾರಿಗಳು, ಇಂದು ಬಾಗಲಕೋಟೆ ಲೋಕಾಯುಕ್ತ ಎಸ್.ಪಿ ಎಂ. ಬಿ. ಸಂಕದಗಾಂವಿ (ಐಪಿಎಸ್) ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಸುರೇಶ ರೆಡ್ಡಿ ಎಂ.ಎಸ್. ಹಾಗೂ ಪಿಐಗಳಾದ ವಿ. ಎನ್. ಕಡಿ, ಎಂ. ಬಿ. ಬಿರಾದಾರ, ಎನ್. ಆರ್. ಖಿಲಾರಿ ಸೇರಿದಂತೆ ಸಿಬ್ಬಂದಿಯನ್ನೊಳಗೊಂಡ ತಂಡವು ಅಮೀನಗಡ ಪಟ್ಟಣ ಪಂಚಾಯತ ಕಚೇರಿಯ ಮೇಲೆ ದಾಳಿ ನಡೆಸಿದೆ.
ದಾಳಿಯ ವೇಳೆ ಅಧಿಕಾರಿಗಳು ಕಚೇರಿಯ ಪ್ರಮುಖ ದಾಖಲೆಗಳನ್ನು ಪರಿಶೀಲಿಸಿದ್ದು, ಸ್ಥಳದಲ್ಲಿದ್ದ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿದ್ದಾರೆ. ಪ್ರಸ್ತುತ ಶೋಧನಾ ಕಾರ್ಯ ಹಾಗೂ ತನಿಖೆ ಮುಂದುವರಿದಿದೆ.

