ತುಮಕೂರು: ಜಿಲ್ಲಾಧಿಕಾರಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ (Lokayukta Raid) ನಡೆಸಿದ್ದು, ಲಂಚ ಪಡೆಯುತ್ತಿದ್ದ ಕಂದಾಯ ಇಲಾಖೆ ಕಚೇರಿ ಸಹಾಯಕನನ್ನು ಬಂಧಿಸಿದೆ.
ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ಬಿ.ಮುರಳಿಧರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಪಟಾಕಿ ಅಂಗಡಿ ಲೈಸೆನ್ಸ್ ನೀಡಲು ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಹೆಗ್ಗೆರೆ ನಿವಾಸಿ ಉಮಾಶಂಕರ್ ಎಂಬವರಿಂದ ಲಂಚ ಪಡೆಯುತ್ತಿದ್ದಾಗ ದಾಳಿ ನಡೆದಿದೆ.
ಪಟಾಕಿ ಅಂಗಡಿ ಅನುಮತಿಗಾಗಿ ಒಂದು ಲೈಸೆನ್ಸ್‌ಗೆ 2,000 ರೂ. ಬೇಡಿಕೆ ಇಟ್ಟಿದ್ದ. ಒಟ್ಟು ಎರಡು ಪಟಾಕಿ ಅಂಗಡಿಗಳ ಲೈಸೆನ್ಸ್‌ಗೆ 4,000 ರೂ. ಲಂಚ ಕೇಳಿದ್ದ. ಮುಂಗಡವಾಗಿ 1,000 ರೂ. ಹಣ ಪಡೆದಿದ್ದ. ಬಾಕಿ ಹಣ ಪಡೆಯುತ್ತಿದ್ದ ವೇಳೆ ದಿಢೀರ್ ದಾಳಿ ನಡೆಸಲಾಗಿದೆ. ಹಣದ ಸಮೇತ ಲೋಕಾಯುಕ್ತರ ಕೈಗೆ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ ಸಿಕ್ಕಿಬಿದ್ದಿದ್ದಾನೆ.
ತುಮಕೂರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೇ ಲೋಕಾಯುಕ್ತ ತಂಡ ಕಾರ್ಯಾಚರಣೆ ನಡೆಸಿದೆ. ಆರೋಪಿ ಬಿ.ಮುರಳಿಧರ್‌ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗಿದೆ. ತುಮಕೂರು ಲೋಕಾಯುಕ್ತ ಪೊಲೀಸರಿಂದ ಭ್ರಷ್ಟ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

