ಬೆಳಗಾವಿ: ಕಾಂಗ್ರೆಸ್ ಅತೃಪ್ತ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಬಿಜೆಪಿಯನ್ನು ಬೆಂಬಲಿಸುವಂತೆ ಬೆಂಬಲಿಗರಿಗೆ ಸೂಚನೆ ನೀಡುತ್ತಿದ್ದಾರೆ ಎಂದು ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ರಮೇಶ್ ಜಾರಕಿಹೊಳಿ ಅವರು ಗೋಕಾಕ್‍ನ ತಮ್ಮ ಕಚೇರಿಯಲ್ಲಿ ಇಂದು ಬೆಂಬಲಿಗರೊಂದಿಗೆ ಸಭೆ ನಡೆಸಿದ್ದರು. ಸಭೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಬೇಕು, ಅವರ ಪರ ಪ್ರಚಾರ ಮಾಡಿ, ಮತ ಹಾಕಬೇಕು. ಯಾರು ಏನೇ ಹೇಳಿದರೂ ಬಿಜೆಪಿ ಪರ ಕೆಲಸ ಮಾಡುಬೇಕು ಎಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
Advertisement
Advertisement
ಗೋಕಾಕ್‍ನಲ್ಲಿ ನಿನ್ನೆ ಕಾಂಗ್ರೆಸ್ ಸಮಾವೇಶ ನಡೆಸಲಾಗಿತ್ತು. ಆದರೆ ರಮೇಶ್ ಜಾರಕಿಹೊಳಿ ಅವರು ಸಮಾವೇಶಕ್ಕೆ ಗೈರಾಗಿದ್ದರು. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಲಖನ್ ಜಾರಕಿಹೊಳಿ, ಮಾಜಿ ಸಚಿವರು ಪ್ರಚಾರ ಮಾಡದಿದ್ದರೂ ಕಾಂಗ್ರೆಸ್‍ಗೆ ಬೆಂಬಲ ನೀಡಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದ್ದರು. ಇದರಿಂದ ಎಚ್ಚೆತ್ತುಕೊಂಡ ರಮೇಶ್ ಜಾರಕಿಹೊಳಿಯವರು ಇಂದು ಬೆಂಬಲಿಗರ ಸಭೆ ಕರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement
ಸಮಾವೇಶದ ಬಳಿಕ ಮಾತನಾಡಿದ ಸತೀಶ್ ಜಾರಕಿಹೊಳಿ ಅವರು, ರಮೇಶ್ ಜಾರಕಿಹೊಳಿಯವರ ಅಸಮಾಧಾನದ ಕುರಿತು ಎಲ್ಲರಿಗೂ ಗೊತ್ತಿದೆ. ಚುನಾವಣೆ ಬಳಿಕ ಬಿಜೆಪಿ ಸೇರುವುದಾಗಿ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಒಂದು ವೇಳೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದರೆ, ಉಪ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಲಖನ್ ಜಾರಕಿಹೊಳಿ ಕಣಕ್ಕೆ ಇಳಿಯುತ್ತಾರೆ ಎಂದು ತಿಳಿಸಿದ್ದರು.
Advertisement
ಲಖನ್ ಜಾರಕಿಹೊಳಿ ಅವರು ಮಾತನಾಡಿ, ಸಹೋದರ, ಮಾಜಿ ಸಚಿವರ ಮನವೊಲಿಸಲು ಪ್ರಯತ್ನಿಸಿದ್ದೇವೆ. ಆದರೆ ಅವರು ಯಾವುದೇ ಕಾರ್ಯಕ್ರಮಕ್ಕೆ ಬರುತ್ತಿಲ್ಲ. ಹೀಗಾಗಿ ಕಾಂಗ್ರೆಸ್‍ಗೆ ಬೆಂಬಲ ನೀಡಬೇಕು ಎಂದು ಕಾರ್ಯಕರ್ತರಿಗೆ ಸೂಚನೆ ನೀಡಿದ್ದೇವೆ. ಇದಕ್ಕೆ ಅವರು ಕೂಡ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದರು.
ಗೋಕಾಕ್ ಸಮಾವೇಶದ ಬಳಿಕ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ರಮೇಶ್ ಜಾರಕಿಹೊಳಿ ನಮ್ಮ ಪಕ್ಷದಲ್ಲಿಯೇ ಇದ್ದಾರೆ. ಅವರು ಎಲ್ಲಿಯೂ ಹೋಗಿಲ್ಲ. ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದಿದ್ದರು.