ಲಕ್ನೋ: ಬಹುಜನ ಸಮಾಜ ಪಕ್ಷ (ಬಿಎಸ್‍ಪಿ) ನಾಯಕಿ ಮಾಯಾವತಿ ಅವರು ತಮ್ಮ ರಾಜಕೀಯ ಬದ್ಧವೈರಿಯಾಗಿದ್ದ ಸಮಾಜವಾದಿ ಪಾರ್ಟಿ (ಎಸ್‍ಪಿ) ಸಂಸ್ಥಾಪಕ, ಸಮಾಜವಾದಿ ಹಿರಿಯ ನಾಯಕ ಮುಲಾಯಂ ಸಿಂಗ್ ಯಾದವ್ ಪರ 24 ವರ್ಷಗಳ ಬಳಿಕ ಪ್ರಚಾರ ಮಾಡಲಿದ್ದಾರೆ.
ಹೌದು. ಉತ್ತರ ಪ್ರದೇಶದಲ್ಲಿ ಬಿಎಸ್‍ಪಿ ಹಾಗೂ ಎಸ್‍ಪಿ ಲೋಕಸಭಾ ಚುನಾವಣಾ ಮೈತ್ರಿ ಮಾಡಿಕೊಂಡಿವೆ. ಹೀಗಾಗಿ ಎರಡೂ ಪಕ್ಷದ ನಾಯಕರು ಒಟ್ಟಾಗಿ ರಾಜ್ಯದಲ್ಲಿ ಪ್ರಚಾರ ಮಾಡಲಿದ್ದಾರೆ. ಮುಲಾಯಂ ಸಿಂಗ್ ಅವರ ಕ್ಷೇತ್ರ ಮೈನ್‍ಪುರಿಯಲ್ಲಿ ಏಪ್ರಿಲ್ 19ರಂದು ನಡೆಯುವ ಬೃಹತ್ ಸಮಾವೇಶದಲ್ಲಿ ಮಾಯಾವತಿ ಕೂಡ ಭಾಗವಹಿಸಲಿದ್ದಾರೆ. ಅಷ್ಟೇ ಅಲ್ಲದೆ ಮುಲಾಯಂ ಸಿಂಗ್ ಪರ ಪ್ರಚಾರ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
Advertisement
Advertisement
ಈ ಕುರಿತು ಎಸ್‍ಪಿ ವಕ್ತಾರ ರಾಜೇಂದ್ರ ಚೌಧರಿ ಅವರು ಪ್ರತಿಕ್ರಿಯೆ ನೀಡಿದ್ದು, ಮೈನ್‍ಪುರಿಯಲ್ಲಿ ಏಪ್ರಿಲ್ 19ರಂದು ನಡೆಯುವ ಸಮಾವೇಶದಲ್ಲಿ ಬಿಎಸ್‍ಪಿ ನಾಯಕಿ ಮಾಯಾವತಿ ಭಾಗವಹಿಸಲಿದ್ದಾರೆ. ಜೊತೆಗೆ ಎಸ್‍ಪಿ ನಾಯಕ ಅಖಿಲೇಶ್ ಯಾದವ್ ಹಾಗೂ ರಾಷ್ಟ್ರೀಯ ಲೋಕದಳ ಅಧ್ಯಕ್ಷ ಅಜಿತ್ ಸಿಂಗ್ ಅವರು, ಮುಲಾಯಂ ಸಿಂಗ್ ಪರ ಪ್ರಚಾರ ಮಾಡಲಿದ್ದಾರೆ ಎಂದು ತಿಳಿಸಿದರು.
Advertisement
24 ವರ್ಷಗಳ ಹಿಂದೆ ಏನಾಗಿತ್ತು?:
ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್ ಅವರ ನೇತೃತ್ವ ಸರ್ಕಾರಕ್ಕೆ ಬಿಎಸ್‍ಪಿ ಬೆಂಬಲ ನೀಡಿತ್ತು. ಆದರೆ 1995ರಲ್ಲಿ ಎರಡೂ ಪಕ್ಷದ ನಾಯಕರಲ್ಲಿ ಭಿನ್ನಮತ ಉಂಟಾಗಿತ್ತು. ಇದರಿಂದಾಗಿ ಬಿಎಸ್‍ಪಿ ನಾಯಕಿ ಮಾಯಾವತಿ ಅವರು, 1995 ಜೂನ್ 2ರಂದು ಸುದ್ದಿಗೋಷ್ಠಿ ನಡೆಸಿ ಎಸ್‍ಪಿಗೆ ನೀಡಿದ್ದ ಬೆಂಬಲ ಹಿಂಪಡೆಯುವುದಾಗಿ ತಿಳಿಸಿದರು. ಇದರಿಂದಾಗಿ ಮುಲಾಯಂ ಸಿಂಗ್ ನೇತೃತ್ವದ ಸರ್ಕಾರ ಪತನಗೊಂಡಿತು. ಸರ್ಕಾರ ಬೀಳಿಸಿದ ಮಾಯಾವತಿ ವಿರುದ್ಧ ಕಿಡಿಕಾರಿದ ಎಸ್‍ಪಿ ಕಾರ್ಯಕರ್ತರು ವಿಭಾನಸಭೆಯ ಮಾಯಾವತಿ ಕೊಠಡಿಗೆ ನುಗ್ಗಿ ಅಲ್ಲಿದ್ದ ವಸ್ತುಗಳನ್ನು ಧ್ವಂಸ ಮಾಡಿದ್ದರು. ಜೊತೆಗೆ ಮಾಯಾವತಿ ಅವರ ಮೇಲೆ ಹಲ್ಲೆ ಮಾಡಿದ್ದರು. ಇದಾದ ಮರು ದಿನವೇ ಬಿಜೆಪಿ ಬೆಂಬಲ ಪಡೆದ ಮಾಯಾವತಿ ಅವರು ಬಹುಮತ ಸಾಬೀತು ಪಡಿಸಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿದಿದ್ದರು.
Advertisement
1995ರ ಘಟನೆಯ ಬಳಿಕ ಮಾಯಾವತಿ ಹಾಗೂ ಮುಲಾಯಂ ಸಿಂಗ್ ಯಾದವ್ ರಾಜಕೀಯ ಬದ್ಧವೈರಿಗಳಾದರು. ಒಟ್ಟಾಗಿ ಯಾವುದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಈಗ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸಲು ಎಸ್‍ಪಿ ನಾಯಕ ಅಖಿಲೇಶ್ ಯಾದವ್ ಜೊತೆಗೆ ಮಾಯಾವತಿ ಕೈಜೋಡಿಸಿದ್ದಾರೆ. ಹೀಗಾಗಿ ಮುಲಾಯಂ ಪುತ್ರ ಪರವೂ ಪ್ರಚಾರ ಮಾಡುವ ನಿರೀಕ್ಷೆಯಿದೆ.
ಎಸ್‍ಪಿ, ಬಿಎಸ್‍ಪಿ ಮೈತ್ರಿ ಮೂಲಗಳ ಪ್ರಕಾರ, ಸಹರಾನ್‍ಪುರ್ ನ ದಿಯೋಬಂದ್‍ನಲ್ಲಿ ಏಪ್ರಿಲ್ 7ರಂದು ಬೃಹತ್ ಸಮಾವೇಶ ನಡೆಯಲಿದೆ. ಅದರಂತೆ ಏಪ್ರಿಲ್ 13ರಂದು ಬಾದಾನ್, ಏಪ್ರಿಲ್ 16ರಂದು ಆಗ್ರಾ, ಏಪ್ರಿಲ್ 19ಕ್ಕೆ ಮೈನ್‍ಪುರ್, ಏಪ್ರಿಲ್ 20ರಂದು ರಾಮ್‍ಪುರ್ ಹಾಗೂ ಫಿರೋಜಾಬಾದ್ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಎರಡೂ ಪಕ್ಷಗಳ ನಾಯಕರು ಭಾಗವಹಿಸಲಿದ್ದಾರಂತೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv