ಕಾರವಾರ: ರಾಜ್ಯ ವಿಧಾನಸಭೆ ಚುನಾವಣೆ ಬಳಿಕ ಕಾಂಗ್ರೆಸ್-ಜೆಡಿಎಸ್ ನಾಯಕರು ಮೈತ್ರಿ ಮಂತ್ರ ಪಟಿಸುತ್ತಿದ್ದು, ಈಗ ಸ್ಥಳೀಯ ಸಂಸ್ಥೆಯಲ್ಲಿಯೂ ದೋಸ್ತಿಗೆ ಮುಂದಾಗಿರುವ ತಂತ್ರವನ್ನು ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ತೆರೆದಿಟ್ಟಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಜೆಡಿಎಸ್ ಯಾವ ಕ್ಷೇತ್ರದಲ್ಲಿ ದುರ್ಬಲವಾಗಿದೆ ಅಲ್ಲಿ ಕಾಂಗ್ರೆಸ್ ಸ್ಪರ್ಧಿಸುತ್ತದೆ. ಕಾಂಗ್ರೆಸ್ ಭದ್ರಕೋಟೆಯಲ್ಲಿ ಜೆಡಿಎಸ್‍ಗೆ ಅವಕಾಶವಿಲ್ಲ. ಇನ್ನು ಯಾವ ಕ್ಷೇತ್ರದಲ್ಲಿ ಎರಡೂ ಪಕ್ಷಗಳು ಬಲಿಷ್ಠವಾಗಿಲ್ಲವೋ ಅಲ್ಲಿ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಹೊಂದಾಣಿಕೆ ಮೂಲಕ ಮತಕ್ಷೇತ್ರದ ಹಂಚಿಕೆಗೆ ಎರಡು ಪಕ್ಷದ ಅಧ್ಯಕ್ಷರು ಚಿಂತನೆ ನಡೆಸಿದ್ದಾರೆ ಎಂದು ತಿಳಿಸಿದರು.
ಅಕ್ರಮವಾಗಿ ಬಾಂಗ್ಲಾದೇಶ ಸೇರಿದಂತೆ ಬೇರೆ ದೇಶಗಳಿಂದ ವಲಸೆ ಬಂದು ರಾಜ್ಯದಲ್ಲಿ ನೆಲೆಸಿದ್ದಾರೆ. ಕೆಲವು ವಿದೇಶಿಗರು ವಿಸಾ ಅವಧಿ ಮುಗಿದಿದ್ದರೂ ರಾಜ್ಯದಲ್ಲಿ ಉಳಿದುಕೊಂಡಿದ್ದಾರೆ. ಅಂತಹ ವ್ಯಕ್ತಿಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ‘ಆರೋಗ್ಯ ಕರ್ನಾಟಕ ಕಾರ್ಡ್’ ಯೋಜನೆಯನ್ನು ಜಾರಿಗೆ ತಂದಿತ್ತು. ಅದನ್ನು ಶೀಘ್ರದಲ್ಲಿಯೇ ಚಾಲ್ತಿಗೆ ತರಲಾಗುವುದು. ಜೊತೆಗೆ ಹಿಂದೆ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ಘೋಷಿಸಿದ್ದ ಎಲ್ಲಾ ಯೋಜನೆಗಳನ್ನು ಒಂದೊಂದಾಗಿ ಜಾರಿಗೆ ತರಲಾಗುತ್ತದೆ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews