ಬೆಂಗಳೂರು: ನಾಳೆಯಿಂದ ಜನವರಿ 31 ರವರೆಗೆ ವಿಧಾನಸಭೆ ಜಂಟಿ ಅಧಿವೇಶನ (Joint Session) ಶುರುವಾಗಲಿದೆ. ಇದೇ ವೇಳೆ ಮನ್ರೇಗಾ ವರ್ಸಸ್ ವಿಬಿಜಿರಾಮ್‌ಜಿ (VB-G RAM G) ಕುರಿತು ವಿಶೇಷ ಚರ್ಚೆ ಜನವರಿ 28, 29 ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ದೋಸ್ತಿ ಪಕ್ಷಗಳು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿವೆ
ನಾಳೆ ಬೆಂಗಳೂರಿನ ಖಾಸಗಿ ಹೊಟೇಲಿನಲ್ಲಿ ಎನ್‌ಡಿಎ (NDA) ಮೈತ್ರಿಪಕ್ಷಗಳ ಜಂಟಿ ಶಾಸಕಾಂಗ ಪಕ್ಷದ ಸಭೆ ಆಯೋಜಿಸಲಾಗಿದೆ. ಸಭೆಯಲ್ಲಿ ಕೇಂದ್ರ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ವಿಶೇಷ ಉಪನ್ಯಾಸ ನೀಡಲಿದ್ದಾರೆ. ಇದಕ್ಕಾಗಿಯೇ ನಾಳೆ ಸಂಜೆ 5 ರಿಂದ 6 ಗಂಟೆವರೆಗೆ ಚೌಹಾಣ್ ಉಪನ್ಯಾಸ ಇರಲಿದೆ.
ವಿಶೇಷ ಸದನದಲ್ಲಿ ಯಾವ ರೀತಿ ಚರ್ಚೆ ನಡೆಸಬೇಕು, ಏನೆಲ್ಲ ಚರ್ಚಿಸಬೇಕು ಅಂತ ಶಿವರಾಜ್ ಸಿಂಗ್ ಚೌಹಾಣ್ ದೋಸ್ತಿ ಶಾಸಕರಿಗೆ ವಿವರಣೆ ನೀಡಲಿದ್ದಾರೆ. ಅದಕ್ಕೂ ಮುನ್ನ ಚೌಹಾಣ್ ಅವರು ವಿಬಿಜಿರಾಮ್‌ಜಿ ಕಾಯ್ದೆಯ ಬಗ್ಗೆ ಸುದ್ದಿಗೋಷ್ಟಿ ನಡೆಸಲಿದ್ದು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಲಿದ್ದಾರೆ. ಇದನ್ನೂ ಓದಿ: ಉದ್ದವ್‌ಗೆ ಕೈಕೊಟ್ಟು ಶಿಂಧೆ ಸೇನಾಗೆ ಎಂಎನ್‌ಎಸ್ ಬಂಬಲ
ಇನ್ನು ದೇಶದಲ್ಲೇ ಮೊದಲ ಬಾರಿಗೆ ವಿಧಾನಸಭೆಯಲ್ಲಿ ವಿಬಿಜಿರಾಮ್‌ಜಿ ಕುರಿತು ಕರ್ನಾಟಕ ಸರ್ಕಾರ ವಿಶೇಷ ಚರ್ಚೆಗೆ ಮುಂದಾಗಿದೆ. ಹೀಗಾಗಿ ವಿಪಕ್ಷ ನಾಯಕರಿಗೆ ಈ ವಿಶೇಷ ಸದನ ಬಹಳ ಮುಖ್ಯವಾಗಿದೆ. ಸದನದಲ್ಲಿ ನಾಯಕರು ಈ ಕಾಯ್ದೆಯ ಸಂಪೂರ್ಣ ಚಿತ್ರಣ ನೀಡಬೇಕಾದ ಅಗತ್ಯವಿದೆ. ಕಾಂಗ್ರೆಸ್ ಆರೋಪ, ಆಕ್ಷೇಪಗಳಿಗೆ ಸದನದಲ್ಲೇ ದೋಸ್ತಿಗಳು ತಕ್ಕ ಕೌಂಟರ್ ಕೊಡಲು ನಿರ್ಧರಿಸಿದ್ದಾರೆ.
ಜತೆಗೆ ನಾಳೆ ಸಂಜೆ ಬಳಿಕ ಬಿಜೆಪಿ-ಜೆಡಿಎಸ್ ಜಂಟಿ ಶಾಸಕಾಂಗ ಪಕ್ಷದ ಸಭೆ ಕೂಡಾ ನಡೆಯಲಿದ್ದು, ರಾಜ್ಯಪಾಲರ ಭಾಷಣ, ವಿಶೇಷ ಸದನದಲ್ಲಿ ಸರ್ಕಾರದ ವೈಫಲ್ಯಗಳ ವಿರುದ್ಧ ಚರ್ಚೆ ಮತ್ತು ಹೋರಾಟಗಳ ಬಗ್ಗೆ ಚರ್ಚಿಸಿ ತಂತ್ರಗಾರಿಕೆ ರೂಪಿಸಲಾಗುತ್ತದೆ.

