ಬೆಳಗಾವಿ: ಕಳೆದ 10 ವರ್ಷ ಕೆಲವರು ನನ್ನನ್ನು ವ್ಯಂಗ್ಯ ಮಾತುಗಳಿಂದ ಚುಚ್ಚಿದರು. ಆದರೆ ಈ ಭಾರೀ ಕ್ಷೇತ್ರ ಮತದಾರರು ನನ್ನ ಹಣೆಬರಹ ಬರೆದಿದ್ದಾರೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಶಾಸಕ ಸಂಜಯ್ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
2013ರ ವಿಧಾನಸಭೆ ಹಾಗೂ 2014ರ ಲೋಕಸಭೆ ಚುನಾವಣೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸೋತಿದ್ದು, ಈ ಬಾರಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಿಂದ ಗೆಲವು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಅಭಿನಂದನಾ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಅಭಿನಂದನಾ ಕಾರ್ಯಕ್ರಮದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವು ಚುನಾವಣೆಯಲ್ಲಿ ಸೋತಾಗ ಚುಚ್ಚು ಮಾತನಾಡಿದ್ದರು. ಆದರೆ ನಾನು ಹಾಗೇ ಮಾಡಲ್ಲ ಎಂದು ಪರೋಕ್ಷವಾಗಿ ಸಂಜಯ್ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದರು.
ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ವದಂತಿಗೆ ಪ್ರತಿಕ್ರಿಯೆ ನೀಡಿದ ಶಾಸಕಿ, ಯಾವುದೇ ಕಾರಣಕ್ಕೂ ನಾನು 2019ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಬೆಳಗಾವಿ ಗ್ರಾಮೀಣ ಮತಕ್ಷೇತ್ರ ಬಿಟ್ಟು ಹೋಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.