– ಆಪರೇಷನ್ ಸಿಂಧೂರ ದಾಳಿಯಲ್ಲಿ ಗಾಯಗೊಂಡಿದ್ದ ಅಬ್ದುಲ್ ಅಜೀಜ್
ಇಸ್ಲಾಮಾಬಾದ್: 2001ರ ಭಾರತೀಯ ಸಂಸತ್ ಭವನದ ಮೇಲಿನ ದಾಳಿಯ ಸಂಚುಕೋರ ಹಾಗೂ 26/11ರ ಮುಂಬೈ ಉಗ್ರರ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಲಷ್ಕರ್-ಎ-ತೈಬಾದ ಪ್ರಮುಖ ಉಗ್ರ ಅಬ್ದುಲ್ ಅಜೀಜ್ (Lashkar Terrorist Abdul Aziz) ಪಾಕಿಸ್ತಾನದ ಬಹಾವಲ್ಪುರದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಅಬ್ದುಲ್ ಅಜೀಜ್ ಪಾಕಿಸ್ತಾನ (Pakistan) ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ ಪ್ರಮುಖ ಹಣಕಾಸು ಕಾರ್ಯಾಚರಣಾ ಮತ್ತು ಕಾರ್ಯತಂತ್ರದ ಮಾಡ್ಯೂಲ್ ಸಂಯೋಜಕರಾಗಿದ್ದ. ಕಳೆದ ಮೇ 7 ರಂದು ಭಾರತದ ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆ ವೇಳೆ ಕ್ಷಿಪಣಿ ದಾಳಿಗೆ ತುತ್ತಾಗಿ ಗಾಯಗೊಂಡಿದ್ದ ಎನ್ನಲಾಗಿದೆ. ಇದನ್ನೂ ಓದಿ: ಸಂಸತ್ ಭವನ ಪಕ್ಕದ ಮಸೀದಿಯಲ್ಲಿ ಎಸ್ಪಿ ಸಂಸದರೊಟ್ಟಿಗೆ ಅಖಿಲೇಶ್ ಯಾದವ್ ಸಭೆ – ಕೆರಳಿದ ಬಿಜೆಪಿ
ಲಷ್ಕರ್-ಇ-ತೈಬಾದ (Lashkar-e-Taiba) ಉಪ ಮುಖ್ಯಸ್ಥ ಸೈಫುಲ್ಲಾ ಕಸೂರಿಯೊಂದಿಗೆ ಅಜೀಜ್ ನಿಕಟ ಸಂಬಂಧ ಹೊಂದಿದ್ದ. ಅಬ್ದುಲ್ ಅಜೀಜ್ ಅಂತ್ಯಕ್ರಿಯೆಯಲ್ಲಿ ಸೈಫುಲ್ಲಾ ಕಸೂರಿ ಮತ್ತು ಅಬ್ದುರ್ ರೌಫ್ ಅವರಂತಹ ಹಿರಿಯ ಲಷ್ಕರ್ ನಾಯಕರು ಭಾಗಿಯಾಗಿದ್ದಾರೆ.
ಲಷ್ಕರ್ ಸಂಘಟನೆಯ ಮುಖ್ಯ ಕೊಂಡಿ
ಅಜೀಜ್ ಲಷ್ಕರ್ ಸಂಘಟನೆಗೆ ಪ್ರಮುಖ ಆರ್ಥಿಕ ಕೊಂಡಿಯಾಗಿದ್ದ. ಗಲ್ಫ್ ರಾಷ್ಟ್ರಗಳು, ಬ್ರಿಟನ್ ಮತ್ತು ಅಮೆರಿಕದಲ್ಲಿರುವ ಪಾಕಿಸ್ತಾನಿ ಸಮುದಾಯಗಳು ಮತ್ತು ಮೂಲಭೂತ ಇಸ್ಲಾಮಿಸ್ಟ್ ಗುಂಪುಗಳಿಂದ ಹಣ ಸಂಗ್ರಹಿಸುತ್ತಿದ್ದ. ಹಣಕಾಸಿನ ಹೊರತಾಗಿ, ಅಜೀಜ್ ಲಾಜಿಸ್ಟಿಕ್ಸ್, ಶಸ್ತ್ರಾಸ್ತ್ರ ಪೂರೈಕೆ ಮತ್ತು ವಿವಿಧ ಭಯೋತ್ಪಾದಕ ಚಟುವಟಿಕೆಗಳಿಗೆ ನೇಮಕಾತಿಯನ್ನೂ ನಿರ್ವಹಿಸುತ್ತಿದ್ದ. ಇದನ್ನೂ ಓದಿ: ದೆಹಲಿಯಲ್ಲಿ ಮಳೆ ಆರ್ಭಟ; ಪ್ರಮುಖ ರಸ್ತೆಗಳು ಜಲಾವೃತ – ಸಂಚಾರ ಅಸ್ತವ್ಯಸ್ತ
ಭಾರತದಲ್ಲಿ ನಡೆದ ಉಗ್ರ ಕೃತ್ಯಗಳಲ್ಲಿ ಭಾಗಿ
ಅಬ್ದುಲ್ ಅಜೀಜ್ ಭಾರತದಲ್ಲಿ ನಡೆದ ಹಲವಾರು ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದ. ನೇರವಾಗಿ ಕಾರ್ಯಾಚರಣೆ ಯೋಜಿಸದಿದ್ದರೂ, ನಿಧಿ ಮತ್ತು ಸಂಪನ್ಮೂಲ ಸುಗಮಗೊಳಿಸುವ ಮೂಲಕ ನಿರ್ಣಾಯಕ ಪಾತ್ರ ವಹಿಸಿದ್ದ. 2001ರಲ್ಲಿ ಸಂಸತ್ ಭವನದ ಮೇಲಿನ ದಾಳಿಗೆ ಪಾಕಿಸ್ತಾನದಿಂದ ಹಣ ಮತ್ತು ಉಪಕರಣಗಳನ್ನು ಸಾಗಿಸಲು ಸಹಾಯ ಮಾಡಿದ್ದಾ ಎಂದು ಗುಪ್ತಚರ ವರದಿಗಳು ಸೂಚಿಸುತ್ತವೆ.
2006ರ ಮುಂಬೈ ಸ್ಥಳೀಯ ರೈಲು ಸ್ಫೋಟಗಳಿಗೂ ಅವರು ಹಣಕಾಸು ಒದಗಿಸಿದ್ದ ಎಂದು ನಂಬಲಾಗಿದೆ. 2008ರ ಮುಂಬೈ ದಾಳಿಯ ಸಮಯದಲ್ಲಿ, ಅಜೀಜ್ ಸಮುದ್ರ ಮಾರ್ಗಗಳ ಮೂಲಕ ಶಸ್ತ್ರಾಸ್ತ್ರಗಳು ಮತ್ತು ಉಪಗ್ರಹ ಫೋನ್‌ಗಳ (ಸ್ಯಾಟಲೈಟ್ ಫೋನ್) ವಿತರಣೆ ಮಾಡಿದ್ದ. ಜೊತೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಳೀಯ ಭಯೋತ್ಪಾದಕ ಮಾಡ್ಯೂಲ್‌ಗಳಿಗೆ ಸಹ ಹಣಕಾಸು ಒದಗಿಸಿಸುವ ಜೊತೆಗೆ ಯುವಕರನ್ನು ಭಯೋತ್ಪಾದನಾ ಸಂಘಟನೆಗಳಿಗೆ ಸೇರಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಸೈಬರ್ ದಾಳಿಗೆ 158 ವರ್ಷದ ಹಳೆಯ ಕಂಪನಿ ಬಂದ್ – 700 ಮಂದಿ ಮನೆಗೆ