ಬೆಂಗಳೂರು: ಹೇಗಾದರೂ ಮಾಡಿ ಒಂದು ಸೂರು ಮಾಡಿಕೊಂಡು ನೆಮ್ಮದಿಯಾಗಿ ಬದುಕಬೇಕು ಎನ್ನುವುದು ಬೆಂಗಳೂರಿಗೆ ಬರುವ ಹಲವರ ಕನಸು. ಹೀಗೆ ಕನಸನ್ನು ನನಸು ಮಾಡಿಕೊಂಡು ಹೇಗೋ ಜೀವನ ಸಾಗಿಸುತ್ತಿದ್ದವರಿಗೆ ಕಳೆದ ಒಂದು ವಾರದಿಂದ ಆತಂಕವೊಂದು ಶುರುವಾಗಿದೆ. ಬಿಡಿಎನಿಂದ (BDA) ಬಂದಿರುವ ನೋಟಿಸ್ ನೋಡಿ ಆಕಾಶವೇ ತಲೆಮೇಲೆ ಬಿದ್ದಂತೆ ಆಗಿದ್ದಾರೆ.
ಬೆಂಗಳೂರು ಉತ್ತರ (Bengaluru North) ತಾಲೂಕಿನ ದಾಸನಪುರ (Dasanapura) ಹೋಬಳಿಯ 15 ಕ್ಕೂ ಹೆಚ್ಚು ಗ್ರಾಮದ ಜಾಗದಲ್ಲಿ ಫೆರಿಫೆರಲ್ ರಸ್ತೆ, ಬಿಎಂಟಿಸಿ ಬಸ್ ಡಿಪೋ ಹಾಗೂ ಟ್ರಕ್ ಟರ್ಮಿನಲ್ ನಿರ್ಮಾಣ ಸಂಬಂಧ 2006ರ ನೋಟಿಫಿಕೇಶನ್ ಉಲ್ಲೇಖಿಸಿ ಭೂ ಸ್ವಾಧೀನಕ್ಕೆ ಭೂಮಿಯ ಮಾಲೀಕರಿಗೆ ಬಿಡಿಎ ನೋಟಿಸ್ ನೀಡಿದೆ.
Advertisement
ದಾಸನಪುರ ಹೋಬಳಿಯ ಆಲೂರು, ಅಡಕಮಾರನಹಳ್ಳಿ, ದೊಂಬರಹಳ್ಳಿ, ಲಕ್ಷ್ಮಿಪುರ ಮಾದವಾರ, ದಾಸನಪುರ, ಚಿಕ್ಕಬಿದರಕಲ್ಲು, ಭೋವಿ ಪಾಳ್ಯ ಹೀಗೆ ದಾಸನಪುರ ಹೋಬಳಿಯ ಸಾವಿರಾರು ಸರ್ವೆ ನಂಬರ್ ಗಳಿಗೆ ನೋಟಿಸ್ ನೀಡಲಾಗಿದೆ.
Advertisement
Advertisement
20 ವರ್ಷಗಳಿಂದ ಯಾವುದೇ ರೀತಿಯ ಉಲ್ಲೇಖ ಮಾಡದೇ ಈಗ ಜಮೀನುಗಳೆಲ್ಲ ಮನೆಗಳಾಗಿದ್ದು, ಜಮೀನು ಮಾಲೀಕರು ಸೈಟ್ ಮಾಡಿ ಮಾರಾಟ ಮಾಡಿ ಹೋಗಿದ್ದಾರೆ. ಸಾವಿರಾರು ಮನೆಗಳು ಈ ಜಾಗದಲ್ಲಿ ಈಗ ನಿರ್ಮಾಣವಾಗಿದ್ದು ಬಿಡಿಎ ನೋಟಿಸ್ ನೋಡಿದ ಜನ ನಾವು ಏನ್ ತಪ್ಪು ಮಾಡಿದ್ದೇವೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
Advertisement
ಬಿಡಿಎ ಪ್ರಾಥಮಿಕ ನೋಟಿಸ್ ನೀಡಿದ್ದು ನಿಮಗೆ ಅಕ್ಷೇಪವಿದ್ದರೆ ಆಕ್ಷೇಪಣೆ ಸಲ್ಲಿಸಿ ಎಂದು ಹೇಳಿದೆ. ಇಷ್ಟು ವರ್ಷ ಸುಮ್ಮನಿದ್ದ ಬಿಡಿಎ ಈಗ ಯಾಕೇ ಹೀಗೆ ಮಾಡುತ್ತಿದೆ? ನಮಗೆ ಮನೆ ಕಟ್ಟಲು ಅನುಮತಿ ನೀಡಿದ್ದಾರೆ. ಮನೆಗಳಿಗೆ ನೀರು ವಿದ್ಯುತ್ ಎಲ್ಲವನ್ನು ಕಾನೂನಿನ ಅಡಿಯಲ್ಲೇ ನೀಡಲಾಗಿದೆ. ನಾವು ಕಂದಾಯ ಸಹ ಕಟ್ಟಿದ್ದೇವೆ. ಈಗ ಜಮೀನನ ಮಾಲೀಕರಿಗೆ ನೋಟಿಸ್ ನೀಡಿದ್ದಾರೆ. ಆದರೆ ಅವರೆಲ್ಲ ಜಮೀನು ಮಾರಾಟ ಮಾಡಿದ್ದಾರೆ. ಈಗ ನಾವು ಏನು ಮಾಡಬೇಕು ಎಂದು ಗ್ರಾಮಸ್ಥರು ದಿಕ್ಕು ತೋಚದೇ ಆತಂಕದಲ್ಲಿದ್ದಾರೆ.
ಸರ್ಕಾರ 2006 ರಲ್ಲೇ ಇಲ್ಲಿ ರಸ್ತೆ, ಡಿಪೋ, ಮತ್ತು ಟ್ರಕ್ ಟರ್ಮಿನಲ್ ಮಾಡುವ ಬಗ್ಗೆ ನಿರ್ಧಾರ ಕೈಗೊಂಡಿದ್ದರೆ ಈ ಸರ್ವೆ ನಂಬರ್ ಬ್ಲಾಕ್ ಮಾಡಬೇಕಿತ್ತು. ಈಗ ನೋಟಿಸ್ ನೀಡುವ ಮೂಲಕ ಗೊಂದಲ ಸೃಷ್ಟಿಸಿದೆ. ನಾವು ಕಷ್ಟ ಪಟ್ಟು ಇಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದೇವೆ. ಈಗ ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ ಎನ್ನುತ್ತಿದ್ದಾರೆ ಜನರು.
ನಾವು ಈ ಜಾಗದಿಂದ ಕದಲುವುದಿಲ್ಲ. ಸರ್ಕಾರ ನಮ್ಮನ್ನು ಸಾಯಿಸಿ ಅಮೇಲೆ ನಮ್ಮ ಜಾಗವನ್ನು ಸ್ವಾಧೀನಕ್ಕೆ ಪಡೆಯಲಿ. ಇದು ನಮ್ಮ ಜಾಗ. ನಮ್ಮ ನೋವನ್ನು ಯಾರೂ ಕೇಳುತ್ತಿಲ್ಲ. ಮುಂದೆ ದಾಸನಪುರ ಹೋಬಳಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಿ, ಹೋರಾಟ ಮಾಡುವುದಾಗಿ ಹೇಳಿದ್ದಾರೆ.