– ಕೆರೆ, ಕಟ್ಟೆಗಳಿಗೆ ನೀರು ಹರಿಸಿ ಅಂತರ್ಜಲ ವೃದ್ಧಿಗೆ ನಿರ್ಧಾರ
ಬೆಂಗಳೂರು: ಮುಂಗಾರು ಮಳೆಯ (Rain) ಕೊರತೆ ಹಾಗೂ ಕಾವೇರಿ (Cauvery Water) ಜಲಾನಯನ ಪ್ರದೇಶದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಜಲಾಶಯಗಳಿಗೆ ನೀರು ಹರಿದುಬಾರದ ಹಿನ್ನೆಲೆಯಲ್ಲಿ, ಕಾವೇರಿ ಕೊಳ್ಳದ ರೈತರ ಹಿತ ಹಾಗೂ ಲಭ್ಯವಿರುವ ನೀರಿನ ಸಮರ್ಪಕ ನಿರ್ವಹಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಸಕ್ತ ಸಾಲಿನಲ್ಲಿ ರೈತರ ಬೆಳೆಗಳಿಗೆ ಕೇವಲ 4 ಕಟ್ಟು ನೀರು ಹರಿಸಲು ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಜಲಸಂಪನ್ಮೂಲ ಹಾಗೂ ಮಂಡ್ಯ (Mandya) ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿಯವರ (N. Chaluvaraya Swamy) ಅಧ್ಯಕ್ಷತೆಯಲ್ಲಿ ವಿಕಾಸಸೌಧದ ಸಮಿತಿ ಕೊಠಡಿಯಲ್ಲಿ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆ ನಡೆಯಿತು. ಈ ಸಭೆಯಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಜಲಾಶಯಗಳಲ್ಲಿ ನೀರಿನ ಲಭ್ಯತೆ ನಿರೀಕ್ಷಿತ ಮಟ್ಟದಲ್ಲಿಲ್ಲ. ಇಂತಹ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರು, ಜಾನುವಾರುಗಳು ಸೇರಿದಂತೆ ಅಗತ್ಯ ಬಳಕೆಗೆ ತೀವ್ರ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಲಭ್ಯವಿರುವ ನೀರನ್ನು ವೈಜ್ಞಾನಿಕವಾಗಿ ಮತ್ತು ಆದ್ಯತೆಯ ಆಧಾರದ ಮೇಲೆ ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು. ಇದನ್ನೂ ಓದಿ: KRSನಿಂದ ತಮಿಳುನಾಡಿಗೆ 4,917 ಕ್ಯೂಸೆಕ್ ನೀರು ರಿಲೀಸ್
ಅರೆ ಖುಷ್ಕಿ ಬೆಳೆಗಳಿಗೆ ಮಾತ್ರ ರೈತರಿಗೆ ಸೂಚನೆ
ನೀರಿನ ಕೊರತೆಯನ್ನು ಪರಿಗಣಿಸಿ ರೈತರು ಪ್ರಸಕ್ತ ಹಂಗಾಮಿನಲ್ಲಿ ಹೆಚ್ಚು ನೀರು ಬೇಡುವ ಭತ್ತ ಹಾಗೂ ಕಬ್ಬು ಸೇರಿದಂತೆ ನೀರಿನ ಬಳಕೆ ಹೆಚ್ಚಾಗುವ ಬೆಳೆಗಳ ಬದಲಿಗೆ ಅರೆ ಖುಷ್ಕಿ ಬೆಳೆಗಳಿಗೆ ಆದ್ಯತೆ ನೀಡಬೇಕು ಎಂದು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.

ಕಡಿಮೆ ನೀರಿನಲ್ಲಿ ಉತ್ತಮ ಇಳುವರಿ ನೀಡುವ ಬೆಳೆಗಳನ್ನು ಬೆಳೆಯುವ ಮೂಲಕ ಲಭ್ಯವಿರುವ ನೀರನ್ನು ಸಮರ್ಥವಾಗಿ ಬಳಸಿಕೊಳ್ಳುವುದರ ಜೊತೆಗೆ ರೈತರ ಬೆಳೆ ನಷ್ಟವನ್ನು ಕನಿಷ್ಠ ಮಟ್ಟಕ್ಕೆ ತರುವ ಪ್ರಯತ್ನ ಮಾಡಲಾಗುವುದು. ಕೃಷಿ ಇಲಾಖೆ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ರೈತರಿಗೆ ಸೂಕ್ತ ಬೆಳೆ ಪದ್ಧತಿ ಕುರಿತು ಅಗತ್ಯ ಮಾರ್ಗದರ್ಶನ ನೀಡಲಿದ್ದಾರೆ ಎಂದು ಚಲುವರಾಯಸ್ವಾಮಿಯವರು ಹೇಳಿದರು.
ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಮೂಲಕ ಅಂತರ್ಜಲ ವೃದ್ಧಿಗೆ ಒತ್ತು
ಕೇವಲ ಬೆಳೆಗಳಿಗೆ ನೀರು ಹರಿಸುವುದಕ್ಕೆ ಸೀಮಿತವಾಗದೆ, ಕಾವೇರಿ ಕೊಳ್ಳದ ವ್ಯಾಪ್ತಿಯಲ್ಲಿರುವ ಕೆರೆ-ಕಟ್ಟೆಗಳನ್ನು ತುಂಬಿಸುವ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.

ಕೆರೆಗಳಿಗೆ ನೀರು ಹರಿಸುವುದರಿಂದ ಮಳೆ ಕೊರತೆಯ ಸಂದರ್ಭದಲ್ಲಿ ರೈತರಿಗೆ ಪರ್ಯಾಯ ನೀರಿನ ಮೂಲ ಲಭ್ಯವಾಗುವುದರ ಜೊತೆಗೆ ಅಂತರ್ಜಲ ಮರುಪೂರಣಕ್ಕೆ ಸಹಕಾರಿಯಾಗಲಿದೆ. ಬೋರ್‌ವೆಲ್‌ಗಳು ಹಾಗೂ ಕೊಳವೆಬಾವಿಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ದೃಷ್ಟಿಯಿಂದಲೂ ಈ ಕ್ರಮ ಅತ್ಯಂತ ಮಹತ್ವದ್ದಾಗಿದೆ ಎಂದು ಸಚಿವರು ಅಭಿಪ್ರಾಯಿಸಿದರು.
ಲಭ್ಯವಿರುವ ನೀರಿನ ಸಮರ್ಪಕ ನಿರ್ವಹಣೆಗೆ ಒತ್ತು
ಪ್ರಸ್ತುತ ಪರಿಸ್ಥಿತಿಯಲ್ಲಿ ನೀರಿನ ಪ್ರತಿಯೊಂದು ಹನಿಯನ್ನೂ ಅತ್ಯಂತ ಜವಾಬ್ದಾರಿಯಿಂದ ಬಳಸಿಕೊಳ್ಳಬೇಕಾಗಿದೆ. ರೈತರ ಕೃಷಿ ಚಟುವಟಿಕೆಗಳಿಗೆ ಅಗತ್ಯ ನೀರು ಒದಗಿಸುವುದರ ಜೊತೆಗೆ ಕುಡಿಯುವ ನೀರು, ಜಾನುವಾರು ಮತ್ತು ಇತರ ಅವಶ್ಯಕತೆಗಳಿಗೆ ನೀರಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ.

ಈ ಹಿನ್ನೆಲೆಯಲ್ಲಿ ಜಲಾಶಯಗಳಲ್ಲಿನ ನೀರಿನ ಮಟ್ಟ, ಒಳಹರಿವು, ಮಳೆ ಪ್ರಮಾಣ ಹಾಗೂ ಮುಂದಿನ ದಿನಗಳಲ್ಲಿ ಲಭ್ಯವಾಗಬಹುದಾದ ನೀರಿನ ಪ್ರಮಾಣವನ್ನು ನಿರಂತರವಾಗಿ ಪರಿಶೀಲಿಸಿ, ಪರಿಸ್ಥಿತಿಗೆ ಅನುಗುಣವಾಗಿ ಮುಂದಿನ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸಚಿವ ಚಲುವರಾಯಸ್ವಾಮಿ ಯವರು ಸೂಚಿಸಿದರು.
ರೈತರ ಸಹಕಾರಕ್ಕೆ ಮನವಿ
ಮುಂಗಾರು ಮಳೆ ಕೊರತೆಯಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ರೈತರು ಸಹಕಾರ ನೀಡಬೇಕು. ಲಭ್ಯವಿರುವ ನಾಲ್ಕು ಕಟ್ಟು ನೀರನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡು, ನೀರು ಉಳಿಸುವ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು.
ಸರ್ಕಾರವು ರೈತರ ಹಿತವನ್ನು ಯಾವುದೇ ಕಾರಣಕ್ಕೂ ಕಡೆಗಣಿಸುವುದಿಲ್ಲ. ಆದರೆ ಪ್ರಸಕ್ತ ಜಲ ಪರಿಸ್ಥಿತಿಯನ್ನು ವಾಸ್ತವಿಕವಾಗಿ ಪರಿಗಣಿಸಿ, ರೈತರ ಕೃಷಿ ಅಗತ್ಯ, ಕುಡಿಯುವ ನೀರಿನ ಭದ್ರತೆ ಹಾಗೂ ಭವಿಷ್ಯದ ನೀರಿನ ಲಭ್ಯತೆ ಈ ಮೂರನ್ನೂ ಸಮತೋಲನದಲ್ಲಿಟ್ಟುಕೊಂಡು ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಲಸಂಪನ್ಮೂಲ ಸಚಿವರು ತಿಳಿಸಿದರು.
ಕಾವೇರಿ ಕೊಳ್ಳದ ರೈತರಿಗೆ ಅಗತ್ಯವಿರುವ ನೀರನ್ನು ಸಮರ್ಪಕವಾಗಿ ನಿರ್ವಹಿಸುವುದರ ಜೊತೆಗೆ ಕೆರೆ-ಕಟ್ಟೆಗಳನ್ನು ತುಂಬಿಸುವ ಮೂಲಕ ಅಂತರ್ಜಲ ವೃದ್ಧಿಗೆ ಆದ್ಯತೆ ನೀಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ಸಭೆಯಲ್ಲಿ ಸ್ಪಷ್ಟಪಡಿಸಲಾಯಿತು.

ಮುಂಗಾರು ಮಳೆ ಕೊರತೆಯ ನಡುವೆಯೂ ರೈತರ ಹಿತ ಕಾಪಾಡುವುದು, ನೀರಿನ ಸಮರ್ಥ ಬಳಕೆ ಹಾಗೂ ಭವಿಷ್ಯದ ಜಲ ಭದ್ರತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ, ಕೃಷಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ನರೇಂದ್ರಸ್ವಾಮಿ, ಶಾಸಕರುಗಳಾದ ಜಿ.ಟಿ.ದೇವೆಗೌಡ, ರಮೇಶ್ ಬಂಡಿಸಿದ್ದೆಗೌಡ, ರವಿಕುಮಾರ್ ಗಣಿಗಾ, ದರ್ಶನ್ ಪುಟ್ಟಣ್ಣಯ್ಯ, ಕೆ.ಆರ್.ಪೇಟೆ ಶಾಸಕ ಮಂಜು, ದಿನೇಶ್ ಗೂಳಿಗೌಡ, ಮಧು ಮಾದೇಗೌಡ, ಶಿವಣ್ಣನವರ್,ಶಿವಕುಮಾರ್, ತಿಮ್ಮಯ್ಯ. ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್, ಕಾವೇರಿ ನೀರಾವರಿ ನಿಗಮ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಇದನ್ನೂ ಓದಿ: ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ಹರಿದ ಕಾವೇರಿ ನೀರು

